ಪ್ರಾದೇಶಿಕ ಪಕ್ಷಗಳಿಗೆ ಎನ್‌ಸಿಪಿ 'ಪವರ್' ತುಂಬಿದ್ದು ಹೇಗೆ ?

Update: 2019-10-25 03:41 GMT

ಪುಣೆ: ಮಿತ್ರಪಕ್ಷವಾದ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ನಿರೀಕ್ಷಿತ ಉತ್ಸಾಹ ತೋರದಿದ್ದರೂ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಇಳಿವಯಸ್ಸಿನಲ್ಲೂ ಹೋರಾಟದ ಕೆಚ್ಚು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

79 ವಯಸ್ಸಿನ ಮುತ್ಸದ್ಧಿ, ತಾನಿನ್ನೂ ಪ್ರಭಾವಿ ಮರಾಠಿ ಮುಖಂಡ ಎನ್ನುವುದನ್ನು ಫಲಿತಾಂಶದ ಮೂಲಕ ಸಾಬೀತುಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಜೀವ ತುಂಬಿದ್ದು ಮಾತ್ರವಲ್ಲದೇ ದೇಶದ ಪ್ರಾದೇಶಿಕ ಪಕ್ಷಗಳ ಪುನಶ್ಚೇತನಕ್ಕೂ ಕಾರಣರಾಗಿದ್ದಾರೆ.

"ನನ್ನ ಮೊದಲ ಆದ್ಯತೆ ನಾಳೆ ಸತಾರಕ್ಕೆ ಭೇಟಿ ನೀಡುವುದು. ನನ್ನ ಮತದಾರರಿಗೆ ನಾನು ವಿಶೇಷ ಕೃತಜ್ಞತೆ ಸಲ್ಲಿಸಬೇಕಾಗಿದೆ" ಎಂದು ಪವಾರ್ ಸ್ಪಷ್ಟಪಡಿಸಿದ್ದಾರೆ. ಕಳೆದ ವಾರ ಸುರಿಯುವ ಮಳೆಯಲ್ಲೂ ಎನ್‌ಸಿಪಿ ನಾಯಕ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.

ಮರಾಠಾ ಸಮುದಾಯದ ಪ್ರಾಬಲ್ಯ ಇರುವ ಪಶ್ಚಿಮ ಮಹಾರಾಷ್ಟ್ರದ ಮತದಾರರು ಮುತ್ಸದ್ಧಿಯ ಉತ್ಸಾಹಕ್ಕೆ ಮಣೆ ಹಾಕಿದ್ದಾರೆಯೇ ವಿನಃ ಬಿಜೆಪಿಯ ಮೀಸಲಾತಿ ಕೊಡುಗೆಗಲ್ಲ. ಧಂಗರ್ ಸಮುದಾಯಕ್ಕೆ ಮೀಸಲಾತಿ ವಿಳಂಬ ಮಾಡಿದ್ದಕ್ಕಾಗಿ ಬಿಜೆಪಿ ಬಹುಶಃ ಬೆಲೆ ತೆತ್ತಿದೆ. ಎನ್‌ಸಿಪಿ ತನ್ನ ಸಾಂಪ್ರದಾಯಿಕ ಮರಾಠ ವೋಟ್‌ಬ್ಯಾಂಕ್ ಉಳಿಸಿಕೊಂಡಿರುವುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ. ಪವಾರ್ ಅವರನ್ನು ಸಮುದಾಯ ಬೆಂಬಲಿಸಿರುವ ಹಿನ್ನೆಲೆಯಲ್ಲಿ ಪುಣೆ, ಅಹ್ಮದ್‌ನಗರ, ಸೋಲಾಪುರ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಎನ್‌ಸಿಪಿ ಲಾಭ ಪಡೆದಿದೆ. ಮರಾಠಾ ಮೀಸಲಾತಿ ತನ್ನ ನೆರವಿಗೆ ಬರುತ್ತದೆ ಎಂಬ ನಿರೀಕ್ಷೆ ಬಿಜೆಪಿಯಲ್ಲಿತ್ತು. ಆದರೆ ಕಾಂಗ್ರೆಸ್ ಮಿತ್ರಪಕ್ಷವಾದ ಎನ್‌ಸಿಪಿಗೆ ಮರಾಠ ಮತದಾರರು ಮಣೆಹಾಕಿದ್ದು, ಬಿಜೆಪಿ ಅವರಿಗೆ ಎರಡನೇ ಆಯ್ಕೆಯಾಗಿತ್ತು ಎನ್ನುವುದನ್ನು ಬಿಜೆಪಿ ಮುಖಂಡರೇ ಒಪ್ಪಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿರುವ ಕೃಷಿ ಸಂಕಷ್ಟ ಮತ್ತು ನಿರುದ್ಯೋಗದ ಬಗ್ಗೆ ಸರ್ಕಾರದ ಉದಾಸೀನ ಧೋರಣೆಯನ್ನು ಎನ್‌ಸಿಪಿ ಮುಖಂಡ ಕಟುವಾಗಿ ಟೀಕಿಸಿದ್ದು, ಮರಾಠಾ ಸಮುದಾಯದವರಲ್ಲಿ ಹೆಚ್ಚಿನ ಪರಿಣಾಮ ಬೀರಿದೆ. ಪಶ್ಚಿಮ ಮಹಾರಾಷ್ಟ್ರದ ಜೀವಾಳ ಎನಿಸಿದ ಕಬ್ಬು ಬೆಳೆ ಕುರಿತ ಸರ್ಕಾರದ ನೀತಿಯನ್ನು ಪವಾರ್ ಟೀಕಿಸಿದ್ದರು. ಇತರ ಮುಖಂಡರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲವಾದರೂ ಮರಾಠಾ ಸಮುದಾಯದ ಮೇಲೆ ನೇರವಾಗಿ ಪರಿಣಾಮ ಬೀರುವ ಈ ಅಂಶವನ್ನು ಪವಾರ್ ಪ್ರಧಾನ ಅಸ್ತ್ರವಾಗಿ ಬಳಸಿದ್ದರು.

ಸುರಿಯುವ ಮಳೆಯಲ್ಲೂ ಪವಾರ್ ರ್ಯಾಲಿ ನಡೆಸಿದ್ದು, ಎನ್‌ಸಿಪಿ ಮುಖಂಡನ ವಿರುದ್ಧ ಇಡಿ ವಿಚಾರಣೆ ಪ್ರಸ್ತಾವ ಮತ್ತಿತರ ಅಂಶಗಳು ಮತದಾರರಲ್ಲಿ ಅನುಕಂಪ ಸೃಷ್ಟಿಸಿದವು ಎಂದು ಬಿಜೆಪಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News