ವಿಧಾನಸಭಾ ಚುನಾವಣೆ: ಗೆದ್ದು ಸೋತ ಬಿಜೆಪಿ

Update: 2019-10-26 04:25 GMT

ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆಯ ಫಲಿತಾಂಶ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಮತದಾನ ನಡೆಯುವ ದಿನವೇ ‘ಮಿನಿ ಸರ್ಜಿಕಲ್ ಸ್ಟ್ರೈಕ್’ ಮೂಲಕ ತನ್ನ ಕೊನೆಯ ಚುನಾವಣಾ ಪ್ರಚಾರವನ್ನು ಬಿಜೆಪಿ ಮಾಧ್ಯಮಗಳ ಮುಖಪುಟದಲ್ಲಿ ಭರ್ಜರಿಯಾಗಿಯೇ ನಡೆಸಿತು. ಜೊತೆಗೆ ಕಾಶ್ಮೀರ, 370ನೇ ವಿಧಿ, ಎನ್‌ಆರ್‌ಸಿ ಇವೆಲ್ಲವುಗಳ ಮೂಲಕ ಹರ್ಯಾಣ, ಮಹಾರಾಷ್ಟ್ರವನ್ನು ಸುಲಭದಲ್ಲಿ ಬುಟ್ಟಿಗೆ ಹಾಕಿಕೊಳ್ಳಬಹುದು ಎಂದೇ ಮೋದಿ ನೇತೃತ್ವದ ಬಿಜೆಪಿ ಭಾವಿಸಿತ್ತು. ಮಹಾರಾಷ್ಟ್ರದಲ್ಲಿ ಕೊನೆಯ ಗಳಿಗೆಯಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡ ಕಾರಣದಿಂದ ಇರುವ ಸಣ್ಣ ಪುಟ್ಟ ಅಡ್ಡಿಯೂ ನಿವಾರಣೆಯಾಗಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಂದು, ‘‘ನಮಗೆ ಸಮ ಸ್ಪರ್ಧಿಯೇ ಇಲ್ಲ’’ ಎಂದು ಘೋಷಿಸಿಕೊಂಡಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಭಾರೀ ಚುನಾವಣಾ ಪ್ರಚಾರಗಳೂ ನಡೆದಿದ್ದವು.

ಇದೇ ಸಂದರ್ಭದಲ್ಲಿ ಕೋಮು ಧ್ರುವೀಕರಣದಲ್ಲೂ ಸಂಘಪರಿವಾರ ಯಶಸ್ವಿಯಾಗಿತ್ತು. ಚುನಾವಣೋತ್ತರ ಸಮೀಕ್ಷೆಗಳು ಕೂಡ ಬಿಜೆಪಿ ಭರ್ಜರಿ ಬಹುಮತ ಪಡೆಯುತ್ತದೆ ಎಂದೇ ಹೇಳಿದ್ದವು. ಆದರೆ ಎಲ್ಲ ಸಮೀಕ್ಷೆಗಳನ್ನು, ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸುವಂತೆ, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶಿವಸೇನೆಯ ನೆರವಿಲ್ಲದೆ ಅಧಿಕಾರ ಹಿಡಿಯಲು ಸಾಧ್ಯವಾಗದಂತಹ ಫಲಿತಾಂಶ ಹೊರಬಿದ್ದಿದೆ. ಹರ್ಯಾಣದಲ್ಲೂ ಬಿಜೆಪಿ ಅಧಿಕಾರ ಹಿಡಿಯಬೇಕಾದರೆ ಜೆಜೆಪಿಯ ಸಹಾಯ ಪಡೆಯಬೇಕಾದಂತಹ ಸನ್ನಿವೇಶವಿದೆ. ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಸರಕಾರದ ಏಳು ಸಚಿವರು ಮತ್ತು ರಾಜ್ಯ ಘಟಕದ ಅಧ್ಯಕ್ಷ, ವಿಧಾನಸಭಾ ಸ್ಪೀಕರ್ ಚುನಾವಣೆಯಲ್ಲಿ ಸೋಲನ್ನು ಉಂಡಿದ್ದಾರೆ. ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಂಡು, ಮಾಧ್ಯಮಗಳೆಲ್ಲವನ್ನೂ ತನ್ನ ಪರವಾಗಿ ಬಳಸಿಕೊಂಡು ಈ ಚುನಾವಣೆಯನ್ನು ಬಿಜೆಪಿ ಎದುರಿಸಿದ ಹಿನ್ನೆಲೆಯಲ್ಲಿ, ಈ ಫಲಿತಾಂಶ ಬಿಜೆಪಿಗೆ ಮುಖಭಂಗವೇ ಸರಿ.

ಒಂದು ರೀತಿಯಲ್ಲಿ ಗೆದ್ದೂ ಬಿಜೆಪಿ ಸೋತಿದೆ. ಎಲ್ಲ ವಿರೋಧಗಳನ್ನು, ಅಡ್ಡಿ ಆತಂಕಗಳನ್ನು ಎದುರಿಸಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಡೆದ ಸ್ಥಾನಗಳು ಸಣ್ಣದೇನೂ ಅಲ್ಲ. ವಿರೋಧ ಪಕ್ಷಗಳು ಮತ್ತೆ ಎದ್ದು ನಿಂತು ಮೋದಿ ನೇತೃತ್ವದ ಬಿಜೆಪಿಯ ವಿರುದ್ಧ ಹೋರಾಡುವುದಕ್ಕೆ ಸಣ್ಣದೊಂದು ಸ್ಫೂರ್ತಿಯನ್ನು ಫಲಿತಾಂಶ ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಫಲಿತಾಂಶ ಒಂದು ಅರ್ಥದಲ್ಲಿ ಬಿಜೆಪಿಗೆ ಭಾರೀ ಸಂಕಟವನ್ನು ತಂದಿದೆ. ಅಲ್ಲಿ ಬಿಜೆಪಿಯ ವಿರೋಧಪಕ್ಷವಾಗಿ ಕೆಲಸ ಮಾಡುತ್ತಿರುವುದು ಎನ್‌ಸಿಪಿ ಅಥವಾ ಕಾಂಗ್ರೆಸ್ ಅಲ್ಲ. ಸ್ವತಃ ಅದರ ಮಿತ್ರ ಪಕ್ಷವಾಗಿರುವ ಶಿವಸೇನೆಯೇ ಬಿಜೆಪಿಯ ನಿಜ ಅರ್ಥದ ವಿರೋಧ ಪಕ್ಷವಾಗಿದೆ. ಶಿವಸೇನೆ ಸುಮಾರು 57 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಹೊಸ ಯುವನಾಯಕನೊಬ್ಬ ಶಿವಸೇನೆಯೊಳಗಿಂದ ಹೊರಹೊಮ್ಮಿದ್ದಾರೆ. ‘‘ಫಲಿತಾಂಶ ಬಿಜೆಪಿಗೆ ಪಾಠವಾಗಿದೆ’’ ಎನ್ನುವ ಹೇಳಿಕೆಯನ್ನು ಶಿವಸೇನೆಯ ಮುಖಂಡರೇ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ತತ್ವ ಸಿದ್ಧಾಂತಗಳಿಗೆ ಎಳ್ಳುನೀರು ಬಿಟ್ಟು ಗೆದ್ದೆತ್ತಿನ ಬಾಲ ಹಿಡಿಯುವ ಹಲವು ರಾಜಕಾರಣಿಗಳಿಗೆ ಈ ಚುನಾವಣೆ ಪಾಠ ಕಲಿಸಿದೆ. ಗುಜರಾತ್‌ನಲ್ಲಿ ಹಿಂದುಳಿದ ವರ್ಗದ ನಾಯಕನೆಂದು ಕರೆಸಿಕೊಂಡ ಅಲ್ಪೇಶ್ ಮತ್ತು ಆತನ ಬಳಗ ಹಿನ್ನಡೆ ಅನುಭವಿಸಿದೆ. ಹಿಂದುಳಿದ ವರ್ಗದ ಹಿತಾಸಕ್ತಿಗಳನ್ನು ಬಿಜೆಪಿಗೆ ಬಲಿಕೊಟ್ಟು, ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ ಈ ಶೂದ್ರ ನಾಯಕನ ಸೋಲು ಎಲ್ಲರಿಗೂ ಪಾಠವಾಗಿದೆ. ಇದೇ ಸಂದರ್ಭದಲ್ಲಿ ಕ್ರೀಡೆಯ ಮೂಲಕ ಭಾರತದ ಹೆಮ್ಮೆಯೆಂದು ಗುರುತಿಸಿಕೊಂಡಿದ್ದ ಯೋಗೇಶ್ವರ್ ದತ್ತ್ ಹಾಗೂ ಬಬಿತಾ ಪೋಗಟ್ ಸೋಲನ್ನಪ್ಪಿರುವುದು ಒಂದಿಷ್ಟು ನೆಮ್ಮದಿಯ ವಿಷಯವಾಗಿದೆ.

ಕ್ರೀಡೆ ಮನಸ್ಸನ್ನು ಒಂದುಗೂಡಿಸಬೇಕು. ರಾಜಕೀಯ ದುರಾಸೆಗಾಗಿ ಕ್ರೀಡಾಳುಗಳು ರಾಜಕೀಯ ಪಕ್ಷ ಸೇರಿ ಮನಸ್ಸನ್ನು ಒಡೆಯುವ ಹೇಳಿಕೆ ನೀಡಿದರೆ ಅದನ್ನು ಮತದಾರರು ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಫಲಿತಾಂಶ ನೀಡಿದೆ. ಅಭಿವೃದ್ಧಿಯ ವಿಷಯದಲ್ಲಿ ಸಂಪೂರ್ಣ ಎಡವಿ ಭಾವನಾತ್ಮಕ ವಿಷಯಗಳ ಮೂಲಕವೇ ಮತ ಯಾಚಿಸುವ ಅನಿವಾರ್ಯ ಸ್ಥಿತಿಯಲ್ಲಿತ್ತು ಬಿಜೆಪಿ. ಚುನಾವಣೆಯ ದಿನವೇ ಗಡಿ ಭಾಗದಲ್ಲಿ ನಡೆದ ಸೇನಾ ಕಾರ್ಯಾಚರಣೆ ಈ ಕಾರಣಕ್ಕೆ ಪ್ರಶ್ನೆಗೊಳಗಾಗಿತ್ತು. ವೀರ ಸಾವರ್ಕರ್‌ಗೆ ಭಾರತ ರತ್ನ ನೀಡುವ ಭರವಸೆಯೂ ಚುನಾವಣೆಯ ಹಿನ್ನೆಲೆಯಲ್ಲೇ ಹೊರಬಿದ್ದಿತ್ತು. ಇಷ್ಟಾದರೂ ಬಿಜೆಪಿ ತನ್ನ ಗುರಿಯನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸಲು ಸಾಧ್ಯವಾಗಿಲ್ಲ ಎನ್ನುವುದು ಭಾರತದ ಪಾಲಿಗೆ ನೆಮ್ಮದಿಯ ವಿಷಯವಾಗಿದೆ.

ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕಾಗಿದೆ. ಈ ಫಲಿತಾಂಶವನ್ನು ಸಂಪೂರ್ಣವಾಗಿ ಆಡಳಿತ ವಿರೋಧಿ ಎಂದು ಹೇಳುವಂತಿಲ್ಲ. ಆಡಳಿತ ವಿರೋಧಿ ಫಲಿತಾಂಶವಾಗಿದ್ದರೆ, ಬಿಜೆಪಿಯ ಎಲ್ಲ ಸ್ಪರ್ಧಿಗಳು ಎರಡೂ ರಾಜ್ಯಗಳಲ್ಲಿ ಠೇವಣಿ ಕಳೆದುಕೊಳ್ಳಬೇಕಾಗಿತ್ತು. ಆಡಳಿತ ಆ ಮಟ್ಟಿಗೆ ದೇಶವನ್ನು ಅಧೋಗತಿಗೆ ತಳ್ಳಿದೆ. ಹಸಿವು ಅಪೌಷ್ಟಿಕತೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬ್ಯಾಂಕುಗಳು ಅತಂತ್ರವಾಗಿವೆ. ಬ್ಯಾಂಕುಗಳಲ್ಲಿದ್ದ ತಮ್ಮ ಹಣವನ್ನು ಪಡೆದುಕೊಳ್ಳಲಾಗದೆ ಜನರು ಬೀದಿಗಿಳಿದಿದ್ದಾರೆ. ನಿರುದ್ಯೋಗಗಳು ಹೆಚ್ಚಿವೆ. ಉದ್ಯಮಗಳೆಲ್ಲ ಒಂದೊಂದಾಗಿ ಮುಚ್ಚಿಕೊಳ್ಳುತ್ತಿವೆ.

ಕಾಂಗ್ರೆಸ್‌ನಾಯಕರ ಟೀಕೆ, ಸಂಘಪರಿವಾರ ನಾಯಕರ ವೈಭವೀಕರಣ, ಪಾಕಿಸ್ತಾನ, ಕಾಶ್ಮೀರ ಈ ವಿಷಯಗಳನ್ನಷ್ಟೇ ಮುಂದಿಟ್ಟುಕೊಂಡು ಬಿಜೆಪಿ ಎರಡೂ ರಾಜ್ಯಗಳಲ್ಲಿ ಸರಳ ಬಹುಮತ ಪಡೆದಿದೆ ಎಂದರೆ, ಜನರನ್ನು ಮೂರ್ಖರಾಗಿಸುವಲ್ಲಿ ಬಿಜೆಪಿ ಈ ಬಾರಿಯೂ ಬಹುತೇಕ ಯಶಸ್ವಿಯಾಗಿದೆ. ಜನರು ಇನ್ನೂ ವಿಸ್ಮತಿಯಲ್ಲೇ ಇದ್ದಾರೆ. ದೇಶದ ವಾಸ್ತವ ಸ್ಥಿತಿಯೇನು ಎನ್ನುವುದನ್ನು ಅವರಿಗೆ ಸ್ಪಷ್ಟ ಮಾಡಿಸಿ, ಅವರನ್ನು ಜಾಗೃತಗೊಳಿಸುವಲ್ಲಿ ವಿರೋಧ ಪಕ್ಷಗಳು ಇನ್ನೂ ವಿಫಲವಾಗಿವೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಂಘಪರಿವಾರ ಈ ನೆಲದಲ್ಲಿ ತನ್ನ ಬೇರನ್ನು ಎಷ್ಟು ಆಳವಾಗಿ ಇಳಿಸಿದೆ ಎನ್ನುವುದಕ್ಕೂ ಇದು ಸಾಕ್ಷಿಯಾಗಿದೆ.

ಇದೇ ಸಂದರ್ಭದಲ್ಲಿ ಫಲಿತಾಂಶ ‘ಇವಿಎಂ ತಿರುಚುವಿಕೆ’ಯ ಕೂಗನ್ನು ಮತ್ತೆ ತಣ್ಣಗಾಗಿಸಿದೆ. ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಂಡಿರುವುದರಿಂದ ‘ಇವಿಎಂ ಅಕ್ರಮ’ ನಡೆದಿರಲಿಕ್ಕಿಲ್ಲ ಎನ್ನುವ ಅಲ್ಪತೃಪ್ತಿಗೆ ಪಕ್ಷಗಳು ಬಲಿಯಾಗಿವೆ. ವಿಧಾನಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಬಿಟ್ಟುಕೊಟ್ಟು ಮಹಾಚುನಾವಣೆಯಲ್ಲಿ ಪಡೆದುಕೊಳ್ಳುವ ಪ್ರಕ್ರಿಯೆಯ ಬಿಜೆಪಿಯ ತಂತ್ರದ ಬಗ್ಗೆಯೂ ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕಾಗಿದೆ. ಯಾವ ಪಕ್ಷವೇ ಗೆದ್ದು ಸರಕಾರ ರಚಿಸಲಿ. ಆದರೆ ಆ ಫಲಿತಾಂಶದ ಕುರಿತಂತೆ ಯಾರೂ ಶಂಕೆಯನ್ನು, ಅನುಮಾನವನ್ನು ಹೊಂದಬಾರದು. ಈ ನಿಟ್ಟಿನಲ್ಲಿ ಇವಿಎಂ ವಿರುದ್ಧದ ಆಂದೋಲನ ಇನ್ನಷ್ಟು ಗಟ್ಟಿಯಾಗಬೇಕಾಗಿದೆ. ಮುಂದಿನ ಮಹಾಚುನಾವಣೆಯ ಒಳಗೆ ಚುನಾವಣಾ ಆಯೋಗ ಮತಪತ್ರಗಳ ಮೂಲಕ ಚುನಾವಣೆ ನಡೆಸುವಂತಾಗುವುದು, ಪ್ರಜಾಸತ್ತೆಯ ಅಳಿವು ಉಳಿವಿನ ಮತ್ತು ಚುನಾವಣೆಯ ವಿಶ್ವಾಸಾರ್ಹತೆಯ ದೃ ಷ್ಟಿಯಿಂದ ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News