ಡೆಲಿವರಿ ಬಾಯ್ ನ ಧರ್ಮ ನೋಡಿ ಆಹಾರ ಬೇಡ ಎಂದ 'ಸ್ವಿಗ್ಗಿ' ಗ್ರಾಹಕನ ವಿರುದ್ಧ ಪ್ರಕರಣ ದಾಖಲು

Update: 2019-10-26 10:34 GMT

ಹೈದರಾಬಾದ್, ಅ.26: ಡೆಲಿವರಿ ಬಾಯ್ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಸ್ವಿಗ್ಗಿ ಮೂಲಕ ತಾನು ಆರ್ಡರ್ ಮಾಡಿದ್ದ ಆಹಾರ  ನಿರಾಕರಿಸಿದ ಹೈದರಾಬಾದ್ ನ ಅಜಯ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಡೆಲಿವರಿ ಎಕ್ಸಿಕ್ಯೂಟಿವ್ ಮುದಸ್ಸಿರ್ ಉಮರ್ ಈ ಕುರಿತು ಪೊಲೀಸ್ ದೂರು ನೀಡಿದ ನಂತರ ತನಿಖೆ ಆರಂಭಗೊಂಡಿದೆ. ಘಟನೆ ಅಕ್ಟೋಬರ್ 21, ಸೋಮವಾರ ನಡೆದಿದ್ದರೂ ಬುಧವಾರವಷ್ಟೇ ಉಮರ್ ದೂರು ನೀಡಿದ ನಂತರ ಬೆಳಕಿಗೆ ಬಂದಿತ್ತು.

ಆಲಿಯಾಬಾದ್ ನಿವಾಸಿಯಾಗಿರುವ ಗ್ರಾಹಕ ಕುಮಾರ್ ಸ್ವಿಗ್ಗಿ ಮೂಲಕ ನಗರದ ಫಲಕ್ನುಮ ಪ್ರದೇಶದಲ್ಲಿರುವ ಗ್ರ್ಯಾಂಡ್ ಬಾವರ್ಚಿ ರೆಸ್ಟಾರೆಂಟ್‍ನಿಂದ ಚಿಕನ್ ಖಾದ್ಯ ಆರ್ಡರ್ ಮಾಡಿದ್ದರು. ಆ್ಯಪ್‍ ನಲ್ಲಿನ ಪ್ರಿಫರೆನ್ಸಸ್ ವಿಭಾಗದಲ್ಲಿ ಅವರು ಹೀಗೆ ಬರೆದಿದ್ದರು. "ಕಡಿಮೆ ಸ್ಪೈಸಿ ಇರಲಿ ಹಗೂ ದಯವಿಟ್ಟು ಹಿಂದು ಡೆಲಿವರಿ ವ್ಯಕ್ತಿ ಇರಲಿ. ಎಲ್ಲಾ ರೇಟಿಂಗ್ ಗಳು ಇದರ ಆಧಾರದಲ್ಲಿ'' ಎಂದು ಬರೆದಿದ್ದರು.

ಡೆಲಿವರಿ ಎಕ್ಸಿಕ್ಯೂಟಿವ್ ಮುದಸ್ಸಿರ್ ಗ್ರಾಹಕನ ಮನೆಯ ವಿಳಾಸ ದೃಢೀಕರಿಸಲು ಕರೆ ಮಾಡಿದ್ದರು. "ಆತ ನನ್ನ ಹೆಸರು ಕೇಳಿದ. ನಾನು ಹೆಸರು ಹೇಳಿದಾಗ ಆತ ಸಿಟ್ಟುಗೊಂಡು, ನಾನು ಮುಸ್ಲಿಂ ಎಂಬ ಕಾರಣಕ್ಕೆ  ಡೆಲಿವರಿ ತಿರಸ್ಕರಿಸುವುದಾಗಿ ಹೇಳಿದ'' ಎಂದು ಮುದಸ್ಸಿರ್ ಹೇಳಿದ್ದಾರೆ.

ಗ್ರಾಹಕ ನಂತರ ಸ್ವಿಗ್ಗಿ ಕಸ್ಟಮರ್ ಕೇರ್ ಗೆ ಕರೆ ಮಾಡಿ ಹಣ ರೀಫಂಡ್ ಮಾಡುವಂತೆ ಕೋರಿದಾಗ  95 ರೂ. ಕ್ಯಾನ್ಸಲೇಶನ್ ಫೀ ಭರಿಸಬೇಕಾಗುವುದು ಎಂದು ಹೇಳಲಾಯಿತು. ಮುಸ್ಲಿಂ ವ್ಯಕ್ತಿಯಿಂದ ಡೆಲಿವರಿ ಸ್ವೀಕರಿಸುವ ಬದಲು ಹಣ ಕಳೆದುಕೊಂಡರೂ ಚಿಂತೆಯಿಲ್ಲ ಎಂದು ಆತ ಹೇಳಿದ್ದಾನೆ.

ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಮುದಸ್ಸಿರ್ ಘಟನೆಯ ಬಗ್ಗೆ ಮಜ್ಲಿಸ್ ಬಚಾವೋ ತೆಹ್ರೀಕ್ ಪಕ್ಷದ ಗಮನ ಸೆಳೆದ ನಂತರ ದೂರು ದಾಖಲಿಸಲು ಆತನಿಗೆ ಸಲಹೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News