ವಿಮಾನದ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇರಿಸಿ ನೇರ ಪ್ರಸಾರ ನೋಡುತ್ತಿದ್ದ ಪೈಲಟ್‍ಗಳು: ಆರೋಪ

Update: 2019-10-28 08:51 GMT

ವಾಷಿಂಗ್ಟನ್, ಅ.28: ಸೌತ್ ವೆಸ್ಟ್ ಏರ್‍ ಲೈನ್ಸ್ ನ ಇಬ್ಬರು ಪೈಲಟ್‍ ಗಳು  ವಿಮಾನದ ಶೌಚಾಲಯದಲ್ಲಿರಿಸಿದ್ದ ರಹಸ್ಯ ಕ್ಯಾಮರಾದ ಮೂಲಕ ವಿಡಿಯೋವನ್ನು ವಿಮಾನದ ಕಾಕ್‍ ಪಿಟ್ ನಲ್ಲಿದ್ದ ಐಪ್ಯಾಡ್‍ ಗೆ ಲೈವ್ ಸ್ಟ್ರೀಮಿಂಗ್ ಮಾಡಿದ್ದರೆಂದು ಅದೇ ವಿಮಾನದ  ಸಿಬ್ಬಂದಿಯೊಬ್ಬರು ಆರೋಪಿಸಿ  ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಫೆಬ್ರವರಿ 2017ರಲ್ಲಿ ವಿಮಾನ ಪಿಟ್ಸ್‍ ಬರ್ಗ್ ನಿಂದ ಫೀನಿಕ್ಸ್ ಗೆ ಸಾಗುತ್ತಿದ್ದಾಗ ತಾನು ಪೈಲಟ್‍ ಗಳ ಕೃತ್ಯ ಕಣ್ಣಾರೆ ಕಂಡಿದ್ದಾಗಿಯೂ ಆಕೆ ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ವಿಮಾನ ಪರಿಚಾರಿಕೆ ಕಳೆದ ವರ್ಷವೇ ಅರಿಝೋನಾ ರಾಜ್ಯ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರೂ  ಈ ಪ್ರಕರಣ ಫೆಡರಲ್ ನ್ಯಾಯಾಲಯಕ್ಕೆ ಇತ್ತೀಚೆಗೆ ವರ್ಗಾಯಿಸಲಾಗಿದೆ.

ತನ್ನ ಸಂಸ್ಥೆಯ ವಿಮಾನಗಳ ಶೌಚಾಲಯಗಳಲ್ಲಿ  ಕ್ಯಾಮರಾ ಇಡಲಾಗುತ್ತದೆ ಎಂಬುದನ್ನು ಸೌತ್ ವೆಸ್ಟ್ ಏರ್‍ ಲೈನ್ಸ್ ನಿರಾಕರಿಸಿದೆಯಲ್ಲದೆ 2017 ಘಟನೆಯನ್ನು `ಅನುಚಿತ ಎಂದು ಬಣ್ಣಿಸಿದೆ.

ವಿಮಾನ ಟೇಕ್-ಆಫ್ ಆದ ಎರಡೂವರೆ ಗಂಟೆಗಳ ನಂತರ ತಾನು ಕಾಕ್ ಪಿಟ್ ಪ್ರವೇಶಿಸಿದಾಗ ಶೌಚಾಲಯದ ವೀಡಿಯೋ ನೇರ ಪ್ರಸಾರ ಆಗುತ್ತಿರುವುದನ್ನು ನೋಡಿದ್ದಾಗಿ ದೂರುದಾರೆ ಹೇಳಿದ್ದಾರೆ. ವಿಮಾನದ ಪೈಲಟ್ ತಮಗೆ ಶೌಚಾಲಯಕ್ಕೆ ಹೋಗುವುದಿದೆಯೆಂದು ಹೇಳಿದ್ದಕ್ಕೆ  ರೀನೀ ಆಗ ಕಾಕ್ ಪಿಟ್ ಗೆ ಆಗಮಿಸಿದ್ದರು. ಐಪ್ಯಾಡ್‍ ನಲ್ಲಿ ಶೌಚಾಲಯದಿಂದ ನೇರ ವೀಡಿಯೋ ಪ್ರಸಾರವಾಗುತ್ತಿರುವುದನ್ನು ಸಹ ಪೈಲಟ್  ಒಪ್ಪಿಕೊಂಡರೂ ಕ್ಯಾಮರಾಗಳು ಎಲ್ಲಾ ಸೌತ್ ವೆಸ್ಟ್ ಬೋಯಿಂಗ್ 737-800 ವಿಮಾನಗಳ ಟಾಪ್ ಸೀಕ್ರೆಟ್ ಸುರಕ್ಷತಾ ಕ್ರಮ ಎಂದು ಸಮಜಾಯಿಷಿ ನೀಡಿದ್ದರೆಂದು ದೂರಿನಲ್ಲಿ ಹೇಳಲಾಗಿದೆ.

ದೂರುದಾರೆ ರೆನೀ ಸಹಿತ  ಇತರ ಪ್ರಯಾಣಿಕರು ಹಾಗೂ ಮಕ್ಕಳು ಈ ನಿರ್ದಿಷ್ಟ ವಿಮಾನದ ಶೌಚಾಲಯ ಬಳಸಿದ್ದರೆಂದೂ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News