ತುಮಕೂರು: ಖಾಕಿ ಕಳಚಿ, ಬಣ್ಣ ಹಚ್ಚಿದ ಪೊಲೀಸ್ ಅಧಿಕಾರಿಗಳು

Update: 2019-10-28 12:49 GMT

ತುಮಕೂರು,ಅ.28:ಪೊಲೀಸರೆಂದರೆ ಸದಾ ಸಿಟ್ಟು, ಸೆಡವು,ಉರಿ ಮುಖದವರು ಎಂದುಕೊಂಡವರಿಗೆ ನರಕಚರ್ತುದಶಿಯ ದಿನವಾದ ಅ. 27 ರಂದು ಪೊಲೀಸರು ಮುಖಕ್ಕೆ ಬಣ್ಣ ಹಚ್ಚಿ, ಪೌರಾಣಿಕ ನಾಟಕದ ಸಂಗೀತದ ಲಯ, ತಾಳಕ್ಕೆ ತಕ್ಕನಾಗಿ ಪದ್ಯಗಳನ್ನು ಹಾಡಿ,ಅಭಿನಯಿಸಿ ನಮ್ಮಲ್ಲೂ ಒಂದು ಸೃಜನಶೀಲ ಮನಸ್ಸಿದೆ, ಅದರಲ್ಲಿಯೂ ಕಲಾವಿದನೂ ಇದ್ದಾನೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ತುಮಕೂರು ಜಿಲ್ಲೆ ರಂಗಭೂಮಿಯ ತವರೂರು ಎಂದಂತೆ ತಪ್ಪಾಗಲಾರದು, ನಾಟಕರತ್ನ ಗುಬ್ಬಿ ವೀರಣ್ಣ, ಹಾಸ್ಯ ಚಕ್ರವರ್ತಿ ನರಸಿಂಹರಾಜು,ಹಿರಣ್ಣಯ್ಯ, ಮಾಸ್ಟರ್ ಹಿರಣ್ಣಯ್ಯ, ಬಿ.ಜಯಶ್ರೀ,ಡಾ.ಲಕ್ಷ್ಮಣದಾಸ್, ರಂಗಾಯಣ ರಘು ಸೇರಿದಂತೆ ಹಲವಾರು ಜನರು ತಮ್ಮ ನಟನೆಯ ಮೂಲಕ ರಂಗಭೂಮಿಗೆ ತಮ್ಮದೆ ಕೊಡುಗೆ ನೀಡಿದ್ದಾರೆ.ಇವರೆಲ್ಲರೂ ವೃತ್ತಿ ರಂಗಭೂಮಿ ಕಲಾವಿದರಾದರೆ,ಶಿಕ್ಷಕರು,ವಕೀಲರು,ಬೇರೆ ಬೇರೆ ವೃತ್ತಿಯಲ್ಲಿ ತೊಡಗಿರುವವರು ಆಗಿಂದಾಗ್ಗೆ ಪೌರಾಣಿಕ ನಾಟಕಗಳನ್ನು ಕಲಿತು ಪ್ರದರ್ಶಿಸಿದ್ದಾರೆ. ಇದೀಗ ಹೊಸ ಸೇರ್ಪಡೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ.

ಅಕ್ಟೋಬರ್ 27 ರಂದು ತುಮಕೂರು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪೌರಾಣಿಕ ನಾಟಕ ಕುರುಕ್ಷೇತ್ರ ಎಂಬ ನಾಟಕವನ್ನು ಪ್ರದರ್ಶಿಸಿದ್ದು, ಇದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ.ಕೋ.ನ.ವಂಶಿಕೃಷ್ಣ ಎಂಬ ಐಪಿಎಸ್ ಅಧಿಕಾರಿ, ದುರ್ಯೋಧನನ ಪಾತ್ರಕ್ಕೆ ಬಣ್ಣ ಹಚ್ಚಿ, ಕಂದ ಪದ್ಯವನ್ನು ಹಾಡಿ, ಆಸ್ಥಾನದ ದೃಶ್ಯದಲ್ಲಿ ಸಭಾಷಣೆಯನ್ನು ಹೇಳುವ ಮೂಲಕ ತನ್ನಲೂ ಒರ್ವ ನಟನಿದ್ದಾನೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರೊಂದಿಗೆ ಇತರೆ ಅಧಿಕಾರಿಗಳು ಸಹ ತಮ್ಮ ಕಂಠ ಮತ್ತು ದೇಹಾಕಾರಕ್ಕೆ ಹೊಂದುವಂತಂಹ ವಿವಿಧ ಪಾತ್ರಗಳನ್ನು ಮಾಡಿ, ಸಾವಿರಾರು ಸಂಖ್ಯೆಯಲ್ಲಿದ್ದ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಜನಸ್ನೇಹಿ ಪೊಲೀಸ್ ಹಾದಿಯಲ್ಲಿ ಇದು ಒಂದು ಹೆಜ್ಜೆ ಎಂದು ಬಣ್ಣಿಸಿರುವ ಪೊಲೀಸ್ ಅಧಿಕಾರಿಗಳು, ಅಪರಾಧ ತಡೆಯುವುದು ಮತ್ತು ಪತ್ತೆ ಹಚ್ಚುವುದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಪೊಲೀಸರು ಒಂದು ತಂಡವಾಗಿ ಕೆಲಸ ಮಾಡುವುದಕ್ಕೇ ಹಿರಿಯ ಅಧಿಕಾರಿಗಳ ಈ ಪ್ರೋತ್ಸಾಹ ಮತ್ತಷ್ಟು ಸಹಕಾರಿಯಾಗಲಿದೆ ಎಂಬುದು ಅವರ ಅನಿಸಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News