ಆಪರೇಷನ್ ಕಮಲ ಆಡಿಯೋ ಪ್ರಕರಣ: ಬಿಎಸ್‌ವೈಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್

Update: 2019-10-28 13:16 GMT

ಬೆಂಗಳೂರು, ಅ.28: ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ವಿಚಾರಣೆಯನ್ನು ನ.7ಕ್ಕೆ ಕಲಬುರಗಿ ಹೈಕೋರ್ಟ್ ಪೀಠ ಮುಂದೂಡಿದೆ.

ಅರ್ಜಿ ವಿಚಾರಣೆ ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮಕುಮಾರ್ ಅವರು ವಾದಿಸಿದರು. ಆದರೆ, ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಗೈರಾದ ಹಿನ್ನೆಲೆಯಲ್ಲಿ ನ್ಯಾಯಪೀಠವು ವಿಚಾಣೆಯನ್ನು ನ.7ಕ್ಕೆ ಮುಂದೂಡಿತು.

ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪಕ್ಷ ತೊರೆದು ಬಿಜೆಪಿ ಸೇರಿದರೆ 10 ಕೋಟಿ ಹಣ ನೀಡುವುದಾಗಿ ಯಡಿಯೂರಪ್ಪ ಆಮಿಷ ಒಡ್ಡಿದ್ದರು. ಈಗ ಯಡಿಯೂರಪ್ಪ ಅವರೇ ಸಿಎಂ ಆಗಿದ್ದಾರೆ. ವಿಧಾನಸಭೆ ಚುನಾವಣೆಗೆ 25 ಲಕ್ಷ ವೆಚ್ಚದ ಮಿತಿಯಿದೆ. ಹೀಗಿರಬೇಕಾದರೆ 10 ಕೋಟಿ ಕೋಡೋದಾಗಿ ಹೇಳಿರೋದು ಆಮಿಷವಾಗುತ್ತದೆ. ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹೀಗಾಗಿ, ತಡೆಯಾಜ್ಞೆ ತೆರವುಗೊಳಿಸಿ ಪೊಲೀಸ್ ತನಿಖೆಗೆ ಅನುವು ಮಾಡಿಕೊಡಬೇಕೆಂದು ನಾಗನಗೌಡ ಅವರ ಮಗ ಶರಣಗೌಡ ಕಂದಕೂರ ಪರ ನ್ಯಾಯವಾದಿ ರವಿವರ್ಮಕುಮಾರ್ ಪೀಠದ ಮುಂದೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಎರಡು ಕಡೆಯ ವಾದ ಆಲಿಸಿದ ನಂತರ ತೀರ್ಪು ನೀಡುವುದಾಗಿ ತಿಳಿಸಿ ವಿಚಾರಣೆಯನ್ನು ಮುಂದೂಡಿತು. ಹೀಗಾಗಿ, ಸದ್ಯಕ್ಕೆ ಬಿಎಸ್ ವೈಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News