ಸರಕಾರ ಬೀಳುವ ಪರಿಸ್ಥಿತಿ ಬಂದರೆ ಬೆಂಬಲಿಸುವ ಬಗ್ಗೆ ಯೋಚನೆ: ಎಚ್.ಡಿ.ಕುಮಾರಸ್ವಾಮಿ

Update: 2019-10-28 13:42 GMT

ಹುಬ್ಬಳ್ಳಿ, ಅ. 28: 'ಉಪಚುನಾವಣೆ ಬಳಿಕ ಬಿಜೆಪಿ ಸರಕಾರ ಬೀಳುವ ಪರಿಸ್ಥಿತಿ ಸೃಷ್ಟಿಯಾದರೆ ಬೆಂಬಲ ನೀಡುವ ಬಗ್ಗೆ ಆಗ ಆಲೋಚಿಸೋಣ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ಯಾರು ಸ್ಪಂದಿಸುತ್ತಾರೋ ಅವರಿಗೆ ನಮ್ಮ ಬೆಂಬಲ. ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು ಬೀದಿಗೆ ಬಂದಿದ್ದು, ಈ ವೇಳೆ ನಮ್ಮ ಸ್ವಾರ್ಥ ಮುಖ್ಯ ಅಲ್ಲ ಎಂದರು.

ಕೆಲವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಉರುಳಿಸಿ ಮತ್ತೊಂದು ಸರಕಾರ ರಚನೆಗೆ ವೇದಿಕೆ ಸಜ್ಜು ಮಾಡಿರುವುದನ್ನು ಗಮನಿಸಿದ್ದೇನೆ ಎಂದ ಕುಮಾರಸ್ವಾಮಿ, ಮತ್ತೆ ಚುನಾವಣೆಗೆ ಹೋಗುವುದು ಸರಿಯಲ್ಲ. ಇದರಿಂದ ರಾಜ್ಯದ ಜನತೆಗೆ ಹೊರೆಯಾಗುತ್ತದೆ ಎಂದು ಹೇಳಿದರು.

ನನಗೇನು ಭಯವಿಲ್ಲ: ಟೆಲಿಫೋನ್ ಕದ್ದಾಲಿಕೆ, ಐಎಂಎ ಪ್ರಕರಣದಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿ ಬೆಂಬಲಕ್ಕೆ ಮುಂದಾಗಿದ್ದಾರೆಂಬುದು ಸುಳ್ಳು. ನನಗೆ ಯಾವುದೇ ಭಯವಿಲ್ಲ. ನನಗೂ ಐಎಂಎ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಆ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದು ನಾನು ಎಂದು ಪ್ರತಿಕ್ರಿಯೆ ನೀಡಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜೆಡಿಎಸ್ ಬಾವುಟ ಹಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ ನಮ್ಮ ಪಕ್ಷದ ಕಾರ್ಯಕರ್ತರು ಡಿಕೆಶಿಗೆ ಬೆಂಬಲ ನೀಡಿರಬಹುದು ಎಂದು ಅವರು ಸ್ಪಷ್ಟಪಡಿಸಿದರು.
ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದಬೇಕೆಂದುಕೊಂಡಿದ್ದೆ. ಆದರೆ, ನಾನು ಇನ್ನೂ ಅಲ್ವ-ಸ್ವಲ್ಪಮಾನವೀಯತೆ ಉಳಿಸಿಕೊಂಡಿದ್ದೇನೆ. ಜನರ ಕಷ್ಟಗಳಿಗೆ ಸ್ಪಂದಿಸುವವರಿಗೆ ನನ್ನ ಬೆಂಬಲ. ಅದು ಬಿಜೆಪಿಯೋ ಅಥವಾ ಕಾಂಗ್ರೆಸೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

"ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಿಎಸ್‌ವೈ ನೇತೃತ್ವದ ಸರಕಾರವನ್ನು ಬೀಳಿಸುವ ಕೆಲಸ ಮಾಡುವುದಾದರೆ ಮಾಡಲಿ. ಅವರು ಜಾತ್ಯತೀತ ವ್ಯಕ್ತಿ. ಅವರು ಪಕ್ಕಾ ಸೆಕ್ಯೂಲರ್. ನಾವು ಮಾತ್ರ ಕೋಮುವಾದಿಗಳು"
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News