ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರಕಾರ ಸಹಿ ಹಾಕಬಾರದೆಂದು ಒತ್ತಾಯಿಸಿ ಅ.31ರಂದು ರಾಜ್ಯ ರೈತ ಸಂಘ ಧರಣಿ

Update: 2019-10-28 13:51 GMT

ಬೆಂಗಳೂರು, ಅ.28: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರಕಾರ ಸಹಿ ಹಾಕಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅ. 31 ರಂದು ಬೆಳಗ್ಗೆ 10. 30ಕ್ಕೆ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರಕಾರ 15 ದೇಶಗಳೊಂದಿಗೆ ಸೇರಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಚಿಂತಿಸಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದರೆ ನಮ್ಮ ಕೃಷಿ ಕ್ಷೇತವು ನಷ್ಟಕ್ಕೆ ಗುರಿಯಾಗುತ್ತದೆ, ಆದ್ದರಿಂದ ಈ ಒಪ್ಪಂದವನ್ನು ಕೇಂದ್ರ ಸರಕಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಈ ಒಪ್ಪಂದದಿಂದ ಬಹುತೇಕ ಕೃಷಿ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಇದೇ ಸಮಯದಲ್ಲಿ ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನೋಡುತ್ತಿವೆ. ಇದರಿಂದ ನಮ್ಮ ದೇಶದ ಕೋಟ್ಯಂತರ ಸಣ್ಣ ರೈತರ ಹಾಗೂ ಮಹಿಳೆಯರ ಜೀವನೋಪಾಯವನ್ನು ಬೆಂಬಲಿಸುವ ಹೈನುಗಾರಿಕೆ ಕ್ಷೇತ್ರಕ್ಕೆ ತೀವ್ರ ಅಪಾಯ ಉಂಟಾಗಲಿದೆ ಎಂದರು.

ಈ ಒಪ್ಪಂದದಿಂದ ಖಾಸಗಿ ಬೀಜ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತವೆ. ರೈತರು ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಂಡರೆ ಅಪರಾಧಿಗಳಾಗುತ್ತಾರೆ. ವಿದೇಶಿ ಕಂಪೆನಿಗಳು ರಾಷ್ಟ್ರೀಯ ನ್ಯಾಯಾಲಯಗಳನ್ನು ಬೈಪಾಸ್ ಮಾಡಬಹುದು. ವಿದೇಶಿ ಹೂಡಿಕೆದಾರರು ಕೃಷಿ ಭೂಮಿಯನ್ನು ಖರೀದಿಸಲು ಅನುಕೂಲವಾಗುತ್ತದೆ. ಸೂಪರ್ ಮಾರುಕಟ್ಟೆ ಮತ್ತು ದೊಡ್ಡ ಕಂಪನಿಗಳು ನೇರ ಚಿಲ್ಲರೆ ವ್ಯಾಪಾರದಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಮಾರುಕಟ್ಟೆ ಮತ್ತು ಸಣ್ಣ ವ್ಯಾಪಾರಸ್ಥರನ್ನು ಅಳಿಸಿ ಹಾಕುತ್ತದೆ. ಇದು ರೈತರು ಮತ್ತು ವ್ಯಾಪಾರಸ್ಥರಿಗೆ ಮಾರಕವಾಗಿದೆ. ಆದ್ದರಿಂದ ಕೇಂದ್ರ ಸರಕಾರ ಈ ಒಪ್ಪಂದದಿಂದ ದೂರ ಸರಿಯಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ..
ನೆರೆ ಸಂತ್ರಸ್ತರ ಸಮಸ್ಯೆ ಪರಿಹರಿಸುವ ಕಡೆ ಗಮನವಹಿಸದೆ ತಿರಸ್ಕಾರ ಮನೋಭಾವದಿಂದ ನೋಡುತ್ತಿರುವುದನ್ನು ವಿರೋಧಿಸಿ ನ.7ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರ ಮನೆಗೆ ಮುತ್ತಿಗೆ ಹಾಕಲು ರೈತ ಸಂಘ ನಿರ್ಧರಿಸಿದೆ. ರಾಜ್ಯದಲ್ಲಿ ನೆರೆ ಪ್ರವಾಹದಿಂದ 4,394 ಗ್ರಾಮಗಳು ಮುಳುಗಡೆಯಾಗಿ 2.5 ಲಕ್ಷಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಪ್ರವಾಹದಿಂದ 15 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಮುಖ್ಯಮಂತ್ರಿಗಳು ಎಲ್ಲ ಸಮಸ್ಯೆಯನ್ನು 15 ದಿನಗಳಲ್ಲಿ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ನೆರ ಸಂತ್ರಸ್ತರ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News