ಸಂತ್ರಸ್ತರಿಗೆ ಪರಿಹಾರ ತಲುಪದಿದ್ದರೆ ಅಧಿಕಾರಿ ಅಮಾನತು: ಆರ್.ಅಶೋಕ್

Update: 2019-10-28 14:00 GMT

ಬೆಳಗಾವಿ, ಅ.28: ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಮನೆಗಳನ್ನು ಕಳೆದುಕೊಂಡಿರುವ ಯಾವುದೇ ಕುಟುಂಬವೂ ಸರಕಾರ ನೀಡುವ ಪರಿಹಾರ ಮತ್ತು ಇತರೆ ಸೌಲಭ್ಯಗಳಿಂದ ವಂಚಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಸೂಚಿಸಿದರು.

ಜಿಲ್ಲೆಯ ಪ್ರವಾಹ ಬಾಧಿತ ಹಿರೇಬಾಗೇವಾಡಿ ಗ್ರಾಮಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಿಜವಾದ ಸಂತ್ರಸ್ತರು ಪರಿಹಾರದಿಂದ ವಂಚಿತಗೊಂಡರೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಯೊಂದು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ತಲುಪಬೇಕು ಎಂಬ ಉದ್ದೇಶದಿಂದ ಸರಕಾರ ಈಗಾಗಲೇ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸಿದೆ. ಮನೆಗಳು ಮತ್ತು ಬೆಳೆಹಾನಿಯನ್ನು ಸಮೀಕ್ಷೆ ಮಾಡುವ ಅಧಿಕಾರಿಗಳು ಸರಕಾರದ ಆಶಯವನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಒಂದು ವೇಳೆ ಅರ್ಹ ಕುಟುಂಬಗಳು ಪರಿಹಾರದಿಂದ ವಂಚಿತಗೊಂಡಿದ್ದರೆ ಅಂತಹ ಕುಟುಂಬಗಳಿಗೂ ಪರಿಹಾರ ನೀಡಲಾಗುವುದು ಎಂದು ಅಶೋಕ್ ಭರವಸೆ ನೀಡಿದರು.

ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿರುವ ಹುತಾತ್ಮ ಯೋಧ ಶಶಿಧರ ಗುರುವೈನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೆಳಗಾವಿ ಜಿಲ್ಲಾ ಪ್ರವಾಸವನ್ನು ಆರಂಭಿಸಿದ ಅಶೋಕ್, ಮೊದಲು ಅಂಬಡಗಟ್ಟಿ ಗ್ರಾಮದಲ್ಲಿ ಹಾನಿಗೊಳಗಾದ ಪಿಎಂಜಿಎಸ್‌ವೈ ರಸ್ತೆಯನ್ನು ವೀಕ್ಷಿಸಿದರು.

ಅಂಬಡಗಟ್ಟಿ-ಬಚ್ಚನಕೆರೆ ನಡುವಿನ ಅಯ್ಯನಕೆರೆ ನೀರಿನಿಂದ ರಸ್ತೆ ಹಾಳಾಗಿರುವುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಮ್ಮ ಅಹವಾಲು ಸಲ್ಲಿಸಿದ ಗ್ರಾಮಸ್ಥರು, ಅಂಬಡಗಟ್ಟಿ-ಬಚ್ಚನಕೆರೆ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು. ಆದಷ್ಟು ಬೇಗನೇ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಎಂ.ಕೆ.ಹುಬ್ಬಳ್ಳಿ ಸಮೀಪದ ಗದ್ದಿ ಕೆರೆ, ಹಿರೇಬಾಗೇವಾಡಿ ಗ್ರಾಮದಲ್ಲಿ ಹಾನಿಗೊಳಗಾದ ಮನೆ ಮತ್ತು ಬೆಳೆಗಳನ್ನು ಪರಿಶೀಸಿದರು. ಗದ್ದಿಕೆರೆ ತುಂಬಿ ಹರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ಉಸುಕಿನ ಚೀಲಗಳನ್ನು ಇಡುವಂತೆ ಹಾಗೂ ನೀರು ಕಡಿಮೆಯಾದ ಬಳಿಕ ರಸ್ತೆ ನಿರ್ಮಿಸಲು ಸೂಚನೆ ನೀಡಿದರು.

ಕಾಕತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿ ಹಾಳಾಗಿರುವ ರಸ್ತೆ ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್ ಲೈನ್, ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳು ಮತ್ತು ಬೆಳೆಯನ್ನು ಪರಿಶೀಲಿಸಿದರು.

ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ವಿವರಿಸಿದರಲ್ಲದೇ ಮೂಲಸೌಕರ್ಯಗಳ ನಿರ್ಮಾಣ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸಚಿವರಿಗೆ ಮನವಿ ಮಾಡಿಕೊಂಡರು.

ಜತ್ರಾಟ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News