ಮಹಾರಾಷ್ಟ್ರ: ಅಸ್ತಿತ್ವ ಉಳಿಸಿಕೊಳ್ಳಲು ಶಿವಸೇನೆಯ ಹೋರಾಟ

Update: 2019-10-29 05:38 GMT

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶದ ಬಳಿಕ ಬಿಜೆಪಿಯ ಜೊತೆಗೆ ಶಿವಸೇನೆ ಇಂತಹದೊಂದು ತಿಕ್ಕಾಟಕ್ಕಿಳಿಯುವುದು ಅನಿರೀಕ್ಷಿತ ಆಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆ ಏಕಕಾಲದಲ್ಲಿ ಆಡಳಿತ ಪಕ್ಷ ಮತ್ತು ವಿರೋಧಪಕ್ಷ ಎರಡೂ ಸ್ಥಾನಗಳನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದೆ. ಕಳೆದ ಅವಧಿಯಲ್ಲೇ ಸ್ಫೋಟಗೊಂಡಿದ್ದ ಶಿವಸೇನೆಯ ಅಸಮಾಧಾನ, ಐದು ವರ್ಷಗಳ ಕಾಲ ನಿರಂತರ ಬೇರೆ ರೂಪಗಳಲ್ಲಿ ವ್ಯಕ್ತವಾಗುತ್ತಲೇ ಇದ್ದವು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಉದ್ಧವ್ ಠಾಕ್ರೆ ಕೊನೆಯವರೆಗೆ ಪ್ರಯತ್ನಿಸಿ ವಿಫಲವಾಗಿದ್ದರು. ಬಳಿಕ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಒತ್ತಡ ಹಾಕಿದರಾದರೂ, ಮೋದಿ ಮತ್ತು ಅಮಿತ್ ಶಾ ಅದಕ್ಕೆ ಸೊಪ್ಪು ಹಾಕಲೇ ಇಲ್ಲ. ಶಿವಸೇನೆ ಬೆಂಬಲ ನೀಡದೇ ಇದ್ದಲ್ಲಿ ಎನ್‌ಸಿಪಿಯ ಬೆಂಬಲದಿಂದ ಅಧಿಕಾರ ರಚಿಸಲು ಅಂದು ಬಿಜೆಪಿ ನಿರ್ಧರಿಸಿದ್ದು ಶಿವಸೇನೆಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಅಧಿಕಾರ ಕೈ ತಪ್ಪಬಾರದು ಎನ್ನುವ ಅನಿವಾರ್ಯ ಕಾರಣಕ್ಕಾಗಿ ಅದು ಬಿಜೆಪಿಗೆ ಬೆಂಬಲ ನೀಡಿತು. ಬಾಳಾ ಠಾಕ್ರೆ ನಿಧನರಾದ ಬಳಿಕ ಶಿವಸೇನೆ ಮಹಾರಾಷ್ಟ್ರದ ಹಿಡಿತವನ್ನು ಕಳೆದುಕೊಂಡಿತ್ತು. ಮೋದಿಯನ್ನು ಮುಂದಿಟ್ಟು ಬಿಜೆಪಿಯು ಶಿವಸೇನೆಯ ಮತಗಳನ್ನು ತನ್ನಡೆಗೆ ಸೆಳೆದುಕೊಳ್ಳುತ್ತಿತ್ತು. ಆದುದರಿಂದ ಶಿವಸೇನೆಗೆ ಅಧಿಕಾರದಲ್ಲಿರುವುದು ಅತ್ಯಗತ್ಯವಾಗಿತ್ತು. ಇದೇ ಸಂದರ್ಭದಲ್ಲಿ ಪಕ್ಷವನ್ನು ಬಿಜೆಪಿ ಆಪೋಷನ ತೆಗೆದುಕೊಳ್ಳದಂತೆಯೂ ನೋಡಿಕೊಳ್ಳಬೇಕಾಗಿತ್ತು. ಆದುದರಿಂದಲೇ ಅದು ಏಕಕಾಲದಲ್ಲಿ ಬಿಜೆಪಿಯ ಮಿತ್ರನಾಗಿಯೂ, ಶತ್ರುವಾಗಿಯೂ ಕೆಲಸ ಮಾಡಬೇಕಾಗಿತ್ತು.

ಕಳೆದ ಬಾರಿ ಆದ ಮುಖಭಂಗಕ್ಕೆ ಈ ಬಾರಿ ಶಿವಸೇನೆ ಸೇಡು ತೀರಿಸಿಕೊಳ್ಳಲು ಹೊರಟಂತಿದೆ. ಆದುದರಿಂದಲೇ ಅದು ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಟ ಹಿಡಿದಿದೆ. ಜೊತೆಗೆ 50-50 ಲಿಖಿತ ಸೂತ್ರಕ್ಕೆ ಬದ್ಧವಾಗಿ ನಿಂತಿದೆ. ಒಂದು ಕಾಲದಲ್ಲಿ ಶಿವಸೇನೆ ಕಾರ್ಮಿಕ ಸಂಘಟನೆಗಳನ್ನು ಮುಂದಿಟ್ಟು ಮಹಾರಾಷ್ಟ್ರವನ್ನು ಆಳುತ್ತಿತ್ತು. ಬಾಳಾ ಠಾಕ್ರೆಯ ಉದ್ವಿಗ್ನಕಾರಿ ಭಾಷಣಗಳು ಅದಕ್ಕೆ ಪೂರಕವಾಗಿದ್ದವು. ಬಿಜೆಪಿ ಮತ್ತು ಶಿವಸೇನೆ ಬೇರೆ ಬೇರೆ ಪಕ್ಷಗಳಾಗಿದ್ದರೂ, ಸೈದ್ಧಾಂತಿಕವಾಗಿ ಅವುಗಳ ನಡುವೆ ಸಾಮ್ಯತೆಗಳಿದ್ದವು. ಕಾರ್ಮಿಕ ಸಂಘಟನೆಗಳು ನೆಲೆ ಕಳೆದುಕೊಂಡ ಬಳಿಕ, ಶಿವಸೇನೆ ಪೂರ್ಣ ಪ್ರಮಾಣದಲ್ಲಿ ಹಿಂದುತ್ವವಾದವನ್ನೇ ನೆಚ್ಚಿಕೊಂಡಿತ್ತು. ಬಿಜೆಪಿ-ಶಿವಸೇನೆಯ ನಡುವೆ ಪರದೆ ನಿಧಾನಕ್ಕೆ ತೆಳುವಾಗುತ್ತಾ ಬಂತು. ಬಿಜೆಪಿ ರಾಷ್ಟ್ರೀಯ ಪಕ್ಷ. ಕಳೆದ ಬಾರಿ ಮಹಾಚುನಾವಣೆ ಸಂದರ್ಭದಲ್ಲಿ ಮೋದಿಯ ಅಲೆ ಶಿವಸೇನೆಯನ್ನು ಕಂಗೆಡಿಸಿತ್ತು. ಎಲ್ಲಿ ಪಕ್ಷವೇ ಬಿಜೆಪಿಯೊಳಗೆ ಲೀನವಾಗಿ ಬಿಡುತ್ತದೆಯೋ ಎಂಬ ಆತಂಕ ಅದಕ್ಕಿತ್ತು. ಬಿಜೆಪಿಯೊಳಗಿದ್ದು, ತನ್ನ ಅಸ್ತಿತ್ವವನ್ನು ಪ್ರಕಟಪಡಿಸುವುದು ಅದಕ್ಕೆ ಅನಿವಾರ್ಯವಾಗಿತ್ತು. ಈ ಕಾರಣಕ್ಕೆ ಬಿಜೆಪಿಯನ್ನು ಕೈ ಬಿಟ್ಟು ಎನ್‌ಸಿಪಿಯೊಂದಿಗೆ ಕೈ ಜೋಡಿಸುವ ಒಳ ಒಪ್ಪಂದವೊಂದಕ್ಕೆ ಬಂದಿತ್ತು. ಆದರೆ ಕಳೆದ ಬಾರಿಯ ಫಲಿತಾಂಶ ಈ ಮೈತ್ರಿಗೆ ಸಹಕರಿಸಲಿಲ್ಲ. ಎನ್‌ಸಿಪಿಯ ಬೆಂಬಲ ಪಡೆದು ಬಿಜೆಪಿ ಅಧಿಕಾರ ನಡೆಸುವುದಕ್ಕೆ ಮುಂದಾದಾಗ ಅನಿವಾರ್ಯವಾಗಿ ಅದು ಬಿಜೆಪಿಯೊಂದಿಗೆ ಸೇರಲೇ ಬೇಕಾಯಿತು. ಎನ್‌ಸಿಪಿಯನ್ನು ಮುಂದಿಟ್ಟುಕೊಂಡು ಶಿವಸೇನೆಯ ಎಲ್ಲ ಬೇಡಿಕೆಗಳನ್ನು ಬಿಜೆಪಿ ನಾಯಕರು ನಿರಾಕರಿಸಿದರು. ಈ ಬಾರಿ ಮತ್ತೆ ಶಿವಸೇನೆ ಹಟ ಹಿಡಿದು ಕೂತಿದೆ. ಬಿಜೆಪಿಯ ಜೊತೆಗೆ ಗರಿಷ್ಠ ಮಟ್ಟದಲ್ಲಿ ವ್ಯವಹಾರ ಕುದುರಿಸುವುದೇ ಶಿವಸೇನೆಯ ಉದ್ದೇಶ. ಚುನಾವಣೆಗೆ ಪೂರ್ವದಲ್ಲೂ, ‘ಸ್ವತಂತ್ರವಾಗಿ ಸ್ಪರ್ಧಿಸುವೆ’ ಎಂದು ಹೇಳಿಕೆ ನೀಡಿದ ಶಿವಸೇನೆ ಕಟ್ಟ ಕಡೆಗೆ ಬಿಜೆಪಿಯೊಂದಿಗೆ ಚುನಾವಣೆಯಲ್ಲಿ ಕೈ ಜೋಡಿಸಿತ್ತು. ಇದೀಗ ಫಲಿತಾಂಶ ಘೋಷಣೆಯಾಗಿ ಸರಕಾರ ರಚಿಸುವ ಸಂದರ್ಭದಲ್ಲಿ ಅದೇ ತಂತ್ರವನ್ನು ಅನುಸರಿಸುತ್ತಿದೆ.

ಕಳೆದ ಅವಧಿಯಲ್ಲಿ ಮೋದಿಯನ್ನು ಅತಿ ಹೆಚ್ಚು ಟೀಕಿಸಿದ ಹೆಗ್ಗಳಿಕೆ ಶಿವಸೇನೆಗೆ ಸೇರಬೇಕು. ಮೋದಿಯ ಆರ್ಥಿಕ ನೀತಿಯನ್ನು ಕಟ್ಟಕಡೆಯವರೆಗೂ ಸ್ಪಷ್ಟ ಧ್ವನಿಯಲ್ಲಿ ವಿರೋಧಿಸಿತ್ತು. ಇದೇ ಸಂದರ್ಭದಲ್ಲಿ, ಬಿಜೆಪಿಗೆ ಮುಜುಗರವಾಗಬೇಕು ಎನ್ನುವ ನಿಟ್ಟಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಡ ಹೇರಿತ್ತು. ಒಟ್ಟಿನಲ್ಲಿ ಶಿವಸೇನೆಗೆ ರಾಮಮಂದಿರಕ್ಕಿಂತಲೂ ಬಿಜೆಪಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ತನ್ನ ಕಾರ್ಯ ಸಾಧಿಸುವುದಷ್ಟೇ ಮುಖ್ಯವಾಗಿತ್ತು. ಬಿಜೆಪಿಯ ಮೂಲಕ ಅಧಿಕಾರವನ್ನು ಅನುಭವಿಸುತ್ತಲೇ ಅದಕ್ಕೆ ಆಗಾಗ ಮುಜುಗರ ಉಂಟು ಮಾಡುತ್ತಿದ್ದ ಶಿವಸೇನೆ, ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತು. ಈ ಬಾರಿ ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆಯನ್ನು ಎರಡು ವರ್ಷದ ಮಟ್ಟಿಗಾದರೂ ಮುಖ್ಯಮಂತ್ರಿ ಮಾಡುವುದಕ್ಕೆ ಉದ್ಧವ್ ಠಾಕ್ರೆ ಹಟ ಹಿಡಿದು ಕೂತಿದ್ದಾರೆ. ಆದರೆ, ಬಿಜೆಪಿ, ಉಪಮುಖ್ಯಮಂತ್ರಿ ಸ್ಥಾನವನ್ನಷ್ಟೇ ಕೊಡುವುದಕ್ಕೆ ಮುಂದಾಗಿದೆ. ಈ ಹಗ್ಗ ಜಗ್ಗಾಟ ಮಹಾರಾಷ್ಟ್ರದ ರಾಜಕೀಯಕ್ಕೆ ಹೊಸ ತಿರುವು ಕೊಟ್ಟರೆ ಅಚ್ಚರಿಯೇನಿಲ್ಲ. ಒಂದು ವೇಳೆ ಎನ್‌ಸಿಪಿಯ ಜೊತೆಗೆ ಸರಕಾರ ರಚನೆ ಸಾಧ್ಯವಾಗುತ್ತದೆಯೆಂದಾಗಿದ್ದರೆ ಬಿಜೆಪಿಯ ಸ್ನೇಹಕ್ಕೆ ಶಿವಸೇನೆ ಎಳ್ಳು ನೀರು ಬಿಡುತ್ತಿತ್ತು. ಆದರೆ ಅಂತಹ ಸ್ಥಿತಿಯಿಲ್ಲ.

ಬಿಜೆಪಿಯನ್ನು ದೂರವಿಡಲು, ಶಿವಸೇನೆ-ಎನ್‌ಸಿಪಿ-ಪಕ್ಷೇತರರೆಲ್ಲ ಒಟ್ಟು ಸೇರಿದರೆ ಸರಕಾರ ರಚನೆ ಅಸಾಧ್ಯವೇನೂ ಅಲ್ಲ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಶರತ್ತುಬದ್ಧವಾದ ಬಾಹ್ಯ ಬೆಂಬಲ ನೀಡಿದರೆ ಬಿಜೆಪಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತು ಕೊಳ್ಳಬೇಕಾಗುತ್ತದೆ. ಶಿವಸೇನೆ ಅದಕ್ಕಾಗಿ ತನ್ನ ಹಿಂದುತ್ವ ಧೋರಣೆಯನ್ನು ಮೃದುವಾಗಿಸಿಕೊಳ್ಳಲು ಸಿದ್ಧವಾಗಬೇಕು. ಜೊತೆಗೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೇರಿಸಿದ ಕಳಂಕವನ್ನು ಹೊತ್ತುಕೊಳ್ಳುವುದಕ್ಕೂ ಸಿದ್ಧವಿದೆಯೇ ಎನ್ನುವುದೂ ಇಲ್ಲಿ ಮುಖ್ಯ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವುದು ಸುಲಭವಿಲ್ಲ. ಹೀಗಾಗಿ ಅಧಿಕಾರವನ್ನು ಅಡ್ಡ ದಾರಿಯ ಮೂಲಕ ಅನುಭವಿಸುವುದಕ್ಕೆ ಕಾಂಗ್ರೆಸ್ ನಾಯಕರು ಮುಂದಾದರೆ ಅಚ್ಚರಿಯಿಲ್ಲ.

105 ಸ್ಥಾನ ಪಡೆದ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಹೇಳುವುದು ಸಹಜವೇ ಆಗಿದೆ. ಆದರೆ ಶಿವಸೇನೆ ಕರ್ನಾಟಕ ರಾಜಕೀಯ ಬೆಳವಣಿಗೆಯನ್ನು ಮುಂದಿಟ್ಟು ಬಿಜೆಪಿಗೆ ಒತ್ತಡ ಹೇರುತ್ತಿದೆ. ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ನ ಮುಖಂಡ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿರುವ ಉದಾಹರಣೆಯಿರುವಾಗ, ಮಹಾರಾಷ್ಟ್ರದಲ್ಲಿ ಯಾಕೆ ನಡೆಯಬಾರದು? ಕನಿಷ್ಠ ಮುಖ್ಯಮಂತ್ರಿ ಸ್ಥಾನವನ್ನಾದರೂ 50-50 ರಂತೆ ಹಂಚಿಕೊಳ್ಳಬೇಕು ಎಂದು ಶಿವಸೇನೆಯ ಬೇಡಿಕೆಗೆ ಕರ್ನಾಟಕದ ರಾಜಕೀಯ ಬೆಳವಣಿಗೆಯೇ ಸ್ಫೂರ್ತಿಯಾಗಿದೆ. ಒಂದು ವೇಳೆ ಬಿಜೆಪಿ ಇದಕ್ಕೆ ಒಪ್ಪಿದರೆ, ಮಹಾರಾಷ್ಟ್ರದಲ್ಲಿ ಯುವನಾಯಕನೊಬ್ಬನ ಉದಯವಾಗುತ್ತದೆ. ಆದಿತ್ಯ ಠಾಕ್ರೆ ಮುಖ್ಯಮಂತ್ರಿಯಾದಲ್ಲಿ, ಮಂಕಾಗಿರುವ ಶಿವಸೇನೆ ಮತ್ತ್ತೆ ತಲೆಕೊಡವಿ ಎದ್ದು ನಿಲ್ಲುವುದರಲ್ಲಿ ಅಚ್ಚರಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News