ಮಂಡ್ಯ: ಪತ್ರಕರ್ತ ನರಸಿಂಹಮೂರ್ತಿ ಬಂಧನ ಖಂಡಿಸಿ ಪ್ರತಿಭಟನೆ

Update: 2019-10-28 18:45 GMT

ಮಂಡ್ಯ, ಅ.28: ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ರಾಯಚೂರಿನಲ್ಲಿ ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್(ಕೆಜೆಯು) ಜಿಲ್ಲಾ ಘಟಕ ಹಾಗೂ ವಿವಿಧ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ  ಪ್ರತಿಭಟನೆ ನಡೆಸಿದರು.

ರಾಜ್ಯ ಸರಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ನರಸಿಂಹಮೂರ್ತಿ ಅವರನ್ನು ‘ಸುಳ್ಳು ಮೊಕದ್ದಮೆ’ ಹೆಸರಿನಲ್ಲಿ ಬಂಧಿಸಲಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಜೆಯು ರಾಷ್ಟ್ರೀಯ ಮಂಡಳಿ ಸದಸ್ಯ ಶಿವಕುಮಾರ್, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನವನ್ನು ಕರ್ನಾಟಕ ಪತ್ರಕರ್ತರ ಸಂಘ ಖಂಡಿಸುತ್ತದೆ.

20 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಾಜದ್ರೋಹ ಸೇರಿದಂತೆ ಕೆಲವು ಪ್ರಕರಣಗಳನ್ನು ದಾಖಲಿಸಿ ಬಂಧಿಸಿರುವುದು ಸಮರ್ಥನೀಯವಲ್ಲ ಎಂದರು.

ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಜೆ.ರಾಮಯ್ಯ ಮಾತನಾಡಿ, ನರಸಿಂಹಮೂರ್ತಿ ಅವರು, ಬೆಂಗಳೂರಿನಲ್ಲೇ ವಾಸವಾಗಿದ್ದು, ಪತ್ರಕರ್ತರಾಗಿ ಮಾತ್ರವಲ್ಲದೆ ಹಲವು ಜನಪರ ಸಂಘಟನೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ನರಸಿಂಹಮೂರ್ತಿ ಅವರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕುವ ಹುನ್ನಾರ ಮತ್ತು ಅಕ್ರಮವಾಗಿದೆ ಎಂದು ಕಿಡಿಕಾರಿದರು.

ಇದರಿಂದ ಪತ್ರಕರ್ತರು ನಿರ್ಭಯವಾಗಿ ವೃತ್ತಿಪರವಾಗಿ ಕೆಲಸ ಮಾಡುವಲ್ಲಿ ಆತಂಕ ಎದುರಿಸುವಂತಾಗಿದೆ. ಈ ಕೂಡಲೇ ನರಸಿಂಹಮೂರ್ತಿ ಅವರನ್ನು ಬಿಡುಗಡೆ ಮಾಡಬೇಕು. ಈ ಬಗ್ಗೆ ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು.

ಪತ್ರಕರ್ತರಾದ ಮಾದರಹಳ್ಳಿ ರಾಜು, ಬಿ.ಟಿ.ಮೋಹನ್ ಕುಮಾರ್, ಎಂ.ಬಿ.ನಾಗಣ್ಣಗೌಡ, ಯತೀಶ್ ಬಾಬು, ಬೂದನೂರು ಸತೀಶ, ಷಣ್ಮುಖೇಗೌಡ, ಚೀರನಹಳ್ಳಿ ಲಕ್ಮಣ್, ಶಶಿಕುಮಾರ್, ಚಿತ್ರ ನಿರ್ದೇಶಕ ಎಂ.ಜಿ.ವಿನಯ್ ಕುಮಾರ್, ಕರ್ನಾಟಕ ಹಿತರಕ್ಷಣಾ ವೇದಿಕೆಯ ಸಂಪತ್ ಕುಮಾರ್, ಅಖಂಡ ರೈತ ಸಂಘದ ಸುಧೀರ್‍ಕುಮಾರ್, ಎಚ್.ಎಸ್.ಚಂದ್ರಶೇಖರ್, ಎಂ.ಸಿ.ನಿತ್ಯಾನಂದ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News