ಯುರೋಪಿಯನ್ ಸಂಸದರ ನಿಯೋಗದ ಕಾಶ್ಮೀರ ಭೇಟಿ 'ಖಾಸಗಿ'?

Update: 2019-10-29 12:46 GMT
PIB photo

ಹೊಸದಿಲ್ಲಿ, ಅ.29: ಸಂವಿಧಾನದ 370ನೇ ವಿಧಿ ರದ್ದುಗೊಂಡ ನಂತರ ಜಮ್ಮು ಕಾಶ್ಮೀರದ ಸ್ಥಿತಿ ಹೇಗಿದೆ ಎಂದು ಪರಾಮರ್ಶಿಸಲು ಇಲ್ಲಿಯ ತನಕ ದೇಶದ ರಾಜಕೀಯ ನಾಯಕರಿಗೆ ಅನುಮತಿ ನಿರಾಕರಿಸಿರುವ ಕೇಂದ್ರ ಸರಕಾರ  27 ಮಂದಿ ಸದಸ್ಯರ ಯುರೋಪಿಯನ್ ಸಂಸದರ  ನಿಯೋಗಕ್ಕೆ ಅನುಮತಿ ನೀಡಿದೆ.  ಆದರೆ ಇದೀಗ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿರುವ 27 ಮಂದಿ ಸಂಸದರಲ್ಲಿ ಹೆಚ್ಚಿನವರು ಬಲಪಂಥೀಯ ಪಕ್ಷಗಳವರಾಗಿದ್ದು  ಕಾಶ್ಮೀರಕ್ಕೆ `ಖಾಸಗಿ ಭೇಟಿ'ಗಾಗಿ ಆಗಮಿಸಿದ್ದವರು ಎಂದು ಹೇಳಲಾಗಿದೆ.

ಇಂದು ಕಾಶ್ಮೀರಕ್ಕೆ ತೆರಳಿರುವ 27 ಮಂದಿಯ ಪೈಕಿ  ಪೋಲೆಂಡ್ ದೇಶದ ಆರು ಮಂದಿ ಬಲಪಂಥೀಯ ಲಾ ಆ್ಯಂಡ್ ಜಸ್ಟಿಸ್ ಪಾರ್ಟಿಯವರಾಗಿದ್ದಾರೆ.  ಕಳೆದ ತಿಂಗಳು ಯುರೋಪಿಯನ್ ಪಾರ್ಲಿಮೆಂಟ್ ಅಧಿವೇಶನದಲ್ಲಿ ಕಾಶ್ಮೀರ ಕುರಿತಾದ ವಿಶೇಷ ಚರ್ಚೆಯ ವೇಳೆ  ಗಡಿಯಾಚೆಗಿನ ಉಗ್ರವಾದದ ವಿಚಾರ ಎತ್ತಿದ್ದ ರೈಝಾರ್ಡ್ ಝಾರ್ನೆಕ್ಕಿ ಈ ನಿಯೋಗದಲ್ಲಿದ್ದಾರೆ.

ಇಟಲಿಯ ಬಲಪಂಥೀಯ ಸಂಘಟನೆ ಫೊರ್ಝಾ ಇಟಾಲಿಯಾದ ಫುಲ್ವಿಯೊ ಮರ್ತುಸೀಲೊ ಕೂಡ ಈ ನಿಯೋಗದಲ್ಲಿದ್ದು ಅದೇ ಅಧಿವೇಶನದಲ್ಲಿ ಅವರು 370ನೆ ವಿಧಿ ರದ್ದತಿಯನ್ನು ಸಮರ್ಥಿಸಿದ್ದರು.  ಇಟಲಿಯ ನಾಲ್ಕು ಸದಸ್ಯರಲ್ಲಿ ಅವರು ಒಬ್ಬರಾಗಿದ್ದಾರೆ. ಇತರ ಮೂವರು ಎಡಪಂಥೀಯ ಪರ್ಟಿಟೋ ಡೆಮೊಕ್ರೆಟಿಕೊ ಹಾಗೂ ಬಲಪಂಥೀಯ ಲೆಗಾ ರಾಜಕೀಯ ಪಕ್ಷಗಳಿಗೆ ಸೇರಿದವರು.

ನಿಯೋಗದಲ್ಲಿನ ಫ್ರಾನ್ಸಿನ ಆರು ಮಂದಿ  ಬಲಪಂಥೀಯ ರೆಸ್ಸೆಂಬೆಲ್ಮೆಂಟ್ ನ್ಯಾಷನಲ್ ಪಾರ್ಟಿ ಸದಸ್ಯರಾಗಿದ್ದಾರೆ. ಅಂತೆಯೇ ಜರ್ಮನಿಯ ಇಬ್ಬರು ಸದಸ್ಯರು ಕೂಡ ಬಲಪಂಥೀಯರಾಗಿದ್ದಾರೆ. ಇಂಗ್ಲೆಂಡಿನ ನಾಲ್ಕು ಮಂದಿ ಸದಸ್ಯರ ಪೈಕಿ ನಾಲ್ಕು ಮಂದಿ ಬ್ರೆಕ್ಸಿಟ್ ಪಾರ್ಟಿ ಸದಸ್ಯರು ಹಾಗೂ ಒಬ್ಬರು ಲಿಬರಲ್ ಡೆಮಾಕ್ರೆಟ್ ಆಗಿದ್ದಾರೆ.

ನಿಯೋಗದಲ್ಲಿ ಸ್ಲೊವಾಕಿಯಾ ಹಾಗೂ ಝೆಚಿಯಾದ ಇಬ್ಬರು ಕ್ರಿಶ್ಚಿಯನ್ ಡೆಮಾಕ್ರೆಟ್ ಗಳಿದ್ದರೆ, ಬೆಲ್ಜಿಯಂನ ಏಕೈಕ ಸದಸ್ಯ ಟಾಮ್ ವಂಡೆಂಡ್ರೀಸ್ಚ್  ಕೂಡ ಫ್ಲೆಮಿಶ್ ಬಲಪಂಥೀಯ ಪಕ್ಷದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News