ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆಯಿಂದ ಎಡವಟ್ಟು

Update: 2019-10-29 13:50 GMT
ನಿರುಪಮಾ ರಾಜೇಂದ್ರ

ಬೆಂಗಳೂರು, ಅ.29: 'ತಾನು ಶಿಫಾರಸ್ಸು ಮಾಡಿದ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ' ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆ ನಿರುಪಮಾ ರಾಜೇಂದ್ರ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

‘ರಾಘವೇಂದ್ರ ನನಗೆ ತುಂಬಾ ಸಂತೋಷವಾಗುತ್ತಿದೆ. ಪ್ರಭಾತ್ ಆರ್ಟ್ ಇಂಟರ್‌ನ್ಯಾಷನಲ್ ಸಂಸ್ಥೆಯ ಎಲ್ಲ ಸದಸ್ಯರಿಗೂ ಅಭಿನಂದನೆ. ಕಳೆದ ಒಂದು ವಾರ, 10 ದಿನಗಳಿಂದ ಪ್ರತಿದಿನ ವಿಧಾನಸೌಧ, ವಿಕಾಸಸೌಧ ಹಾಗೂ ಸಚಿವಾಲಯದಲ್ಲಿ ಚರ್ಚೆಗಳನ್ನು ನಡೆಸಿದ್ದೇವೆ. 2 ಸಾವಿರ ಅರ್ಜಿಗಳು ಬಂದಿದ್ದು, ಯಾರು ನಿಜವಾಗಿಯೂ ಅರ್ಹರು, ಎಷ್ಟು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿದ್ದೇವೆ. ಸಂಗೀತ ಹಾಗೂ ನೃತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರಕಾರ ನನ್ನನ್ನು ಆಯ್ಕೆ ಸಮಿತಿಗೆ ತೆಗೆದುಕೊಂಡಿತ್ತು. ಸಮಿತಿಯ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹಾಗೂ ಮುಖ್ಯಮಂತ್ರಿ ನನ್ನ ಶಿಫಾರಸ್ಸಿಗೆ ಗೌರವಕೊಟ್ಟರು. ನಾನು ಶಿಫಾರಸ್ಸು ಮಾಡಿದ ಐವರಿಗೆ ಪ್ರಶಸ್ತಿ ಬಂದಿದೆ. ಒಬ್ಬ ಕಲಾವಿದೆಯಾಗಿ ನಾನು ಇದನ್ನು ಮಾಡಲು ಸಾಧ್ಯವಾಯಿತು ಎಂಬ ಹೆಮ್ಮೆಯಿದೆ' ಎಂದು ನಿರುಪಮಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸಂಘ-ಸಂಸ್ಥೆಗಳ ವಿಭಾಗದಲ್ಲಿ ಪ್ರಭಾತ್ ಆರ್ಟ್ ಇಂಟರ್‌ನ್ಯಾಷನಲ್ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗುಟ್ಟನ್ನು ಆಯ್ಕೆ ಸಮಿತಿಯ ಸದಸ್ಯರು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಸದಸ್ಯರೊಬ್ಬರು ತಾನು ಶಿಫಾರಸ್ಸು ಮಾಡಿದ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News