ಖಾಸಗಿ ಕಂಪೆನಿಯಲ್ಲಿ ಕಳ್ಳತನ: ಪೊಲೀಸ್ ತನಿಖೆಗೆ ಹೆದರಿ ಸೂಪರ್ ವೈಸರ್ ಆತ್ಮಹತ್ಯೆ- ಆರೋಪ

Update: 2019-10-29 14:49 GMT

ಮೈಸೂರು,ಅ.29: ಖಾಸಗಿ ಕಂಪೆನಿಯೊಂದರಲ್ಲಿ ಕಳ್ಳತನ ನಡೆದ ಹಿನ್ನಲೆ ಕಂಪೆನಿಯ ಉದ್ಯೋಗಿ ಅತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹೊರವಲಯದಲ್ಲಿರುವ ಹೂಟಗಳ್ಳಿಯ ಸ್ಪೆಕ್ಟ್ರಾ ಪೈಪ್ಸ್ ಕಂಪೆನಿಯ ಉದ್ಯೋಗಿ ಹರೀಶ್ ಕುಮಾರ್ (42) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕುವೆಂಪುನಗರ ಪೊಲೀಸ್ ಠಾಣೆಯ ಮಧುವನದಲ್ಲಿ ಈ ಘಟನೆ ನಡೆದಿದೆ.

ಹರೀಶ್ ಕುಮಾರ್ ಕಂಪೆನಿಯ ಸೂಪರ್ ವೈಸರ್ ಆಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಫ್ಯಾಕ್ಟರಿಯಲ್ಲಿ ಕಳ್ಳತನ ನಡೆದಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಪದಾರ್ಥಗಳು ಕಳ್ಳತನವಾಗಿತ್ತು. ಈ ಬಗ್ಗೆ ಹರೀಶ್ ಕುಮಾರ್ ರವರೇ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ನಡುವೆ ಹರೀಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೆಯೇ ಕಂಪೆನಿಯಲ್ಲಿ ಕಿರುಕುಳ ಕೊಡಲಾಗುತ್ತಿತ್ತು ಎಂದು ಹರೀಶ್ ಕುಮಾರ್ ಡೈರಿಯಲ್ಲಿ ಉಲ್ಲೇಖಿಸಿರುವುದಾಗಿ ಕುಟುಂಬದವರು ಹೇಳಿಕೆ ನೀಡಿದ್ದಾರೆ. 

ಹರೀಶ್ ಕುಮಾರ್ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕಳ್ಳತನಕ್ಕೂ ಹರೀಶ್ ಕುಮಾರ್ ಗೂ ಸಂಬಂಧ ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಂಪೆನಿ ಮಾಲಕ ಅನಿಲ್ ಮೆಹ್ರಾ ಭೇಟಿ ನೀಡಿದ್ದು, ಮಾಲಕನ ವಿರುದ್ಧ ಕುಟುಂಬಸ್ಥರು ತಿರುಗಿ ಬಿದ್ದರು. ಈ ವೇಳೆ ಹರೀಶ್ ಕುಮಾರ್ ಸನ್ನಡತೆಯವರು ಎಂದು ಮಾಲಕ ಅನಿಲ್ ಮೆಹ್ತಾ ಸಮರ್ಥಿಸಿಕೊಂಡರು. ಈ ಸಂಬಂದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News