ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಅ.31 ಅಂತಿಮ ದಿನ

Update: 2019-10-29 15:01 GMT

ಬೆಂಗಳೂರು, ಅ.29: ಅವಧಿ ಮುಕ್ತಾಯಗೊಳ್ಳಲಿರುವ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಅ.31 ರಂದು ಕೊನೆಯ ದಿನಾಂಕವಾಗಿದ್ದು, ನ.12ಕ್ಕೆ ಮತದಾನ ನಡೆಯಲಿದೆ.

ಈಗಾಗಲೇ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದು, ನಾಮಪತ್ರಗಳ ಸಲ್ಲಿಕೆ ನಡೆಯುತ್ತಿದೆ. ಅ.31 ಕ್ಕೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ನ.2ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನ.4ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಅವಶ್ಯಕತೆಯಿದ್ದಲ್ಲಿ ನ.12 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ನ.13 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು, ನ.14 ರಂದು ಆಯಾ ತಾಲೂಕು ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದೆ. ಅದೇ ದಿನವೇ ಚುನಾವಣೆ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಎರಡು ಮಹಾನಗರ ಪಾಲಿಕೆಗಳು, 6 ನಗರಸಭೆಗಳು, 3 ಪುರಸಭೆಗಳು ಹಾಗೂ 3 ಪಟ್ಟಣ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ ಐದು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. 14 ನಗರ ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ, 13,04,614 ಮತದಾರರು ಮತ ಚಲಾವಣೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News