ಕುಶಾಲನಗರ ನ್ಯಾಯಾಲಯದಿಂದ ಪರಾರಿಯಾಗಿದ್ದ ಆರೋಪಿ ಸೆರೆ: ಹಿಡಿದುಕೊಟ್ಟ ಮೆಕ್ಯಾನಿಕ್ ಗೆ ಸನ್ಮಾನ

Update: 2019-10-29 18:21 GMT
ಮೆಕ್ಯಾನಿಕ್ ರಫೀಕ್ ಗೆ ಸನ್ಮಾನ ಮಾಡುತ್ತಿರುವ ಪೊಲೀಸರು (ಒಳ ಚಿತ್ರದಲ್ಲಿ ಆರೋಪಿ ರಾಮು)

ಮಡಿಕೇರಿ, ಅ.29: ಕುಶಾಲನಗರ ನ್ಯಾಯಾಲಯದ ಆವರಣದ ಶೌಚಾಲಯದ ಕಿಂಡಿಯಿಂದ ಪರಾರಿಯಾಗಿದ್ದ ಕೊಲೆ ಆರೋಪಿ ರಾಮು ಎಂಬಾತನನ್ನು ಇಂದು ಬಂಧಿಸಲಾಗಿದೆ.

ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿಯಲ್ಲಿ ಸ್ಥಳೀಯ ಮೆಕಾನಿಕ್ ರಫೀಕ್ ಅವರ ಸಮಯ ಪ್ರಜ್ಞೆಯಿಂದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅ.28 ರಂದು ನ್ಯಾಯಾಲಯದ ಶೌಚಾಲಯದ ಕಿಂಡಿಯಿಂದ ಹೊರಕ್ಕೆ ಜಿಗಿದು ನಾಪತ್ತೆಯಾಗಿದ್ದ ರಾಮು ತೆಪ್ಪದಕಂಡಿಯಲ್ಲಿ ಇಂದು ಕಾಣಿಸಿಕೊಂಡಿದ್ದ. ತಕ್ಷಣ ಜಾಗೃತರಾದ ಮೆಕಾನಿಕ್ ರಫೀಕ್ ಸಾರ್ವಜನಿಕರ ಸಹಕಾರ ಪಡೆದು ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾದರು. 

ಇತ್ತೀಚೆಗೆ ಹಾರಂಗಿ ಸಮೀಪದ ಬೆಂಡೆಬೆಟ್ಟ ಗ್ರಾಮದಲ್ಲಿ ಆರೋಪಿ ರಾಮು ತನ್ನ ಎರಡನೇ ಪತ್ನಿಯನ್ನು ಕೊಲೆಗೈದು ಶವವನ್ನು ಕಂಬಳಿಯಿಂದ ಸುತ್ತಿ ಬಿದುರು ಗಿಡದ ಬುಡದಲ್ಲಿಟ್ಟು ತಲೆಮರೆಸಿಕೊಂಡಿದ್ದ. ತೀವ್ರ ಕಾರ್ಯಾಚರಣೆಯ ನಂತರ ಈತನನ್ನು ಬಂಧಿಸಿದ ಪೊಲೀಸರು ಸೋಮವಾರ ಕುಶಾಲನಗರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತಂದಿದ್ದರು. ಮಧ್ಯಾಹ್ನ ಸುಮಾರು ಮೂರೂವರೆ ಗಂಟೆ ಸಮಯದಲ್ಲಿ ಶೌಚಾಲಯಕ್ಕೆ ಹೋಗಬೇಕೆಂದು ರಾಮು ತಿಳಿಸಿದ ಮೇರೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ರಾಮು ಶೌಚಾಲಯದ ಒಳಭಾಗದ ಕಿಂಡಿಯಿಂದ ಹಾರಿ ಪರಾರಿಯಾಗಿದ್ದ. ತೀವ್ರ ಶೋಧ ಕಾರ್ಯ ನಡೆಸಿ ವಿಫಲರಾದ ಪೊಲೀಸರು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಆರೋಪಿ ಬಗ್ಗೆ ಮಾಹಿತಿ ನೀಡಿದ್ದರು. 

ಇಂದು ಬೆಳಗ್ಗೆ ಏಳು ಮೂವತ್ತರ ಸುಮಾರಿಗೆ ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಗ್ಯಾರೇಜ್ ನಡೆಸುತ್ತಿರುವ ರಫೀಕ್ ರಾಮುವನ್ನು ಗುರುತಿಸಿದರು. ಗುಡ್ಡೆಹೊಸೂರು ಸಮೀಪದ ತೆಪ್ಪದ ಕಂಡಿಯ ಸೇತುವೆಯ ಮೂಲಕ ಪಿರಿಯಾಪಟ್ಟಣ ತಾಲೂಕಿಗೆ ಸೇರುವ ಮತ್ತೊಂದು ಗ್ರಾಮಕ್ಕೆ ತೆರಳುತ್ತಿರುವುದನ್ನು ಗಮನಿಸಿದರು. ತಕ್ಷಣ ಎಚ್ಚೆತ್ತುಕೊಂಡ ರಫೀಕ್ ಸಾರ್ವಜನಿಕರ ಸಹಕಾರದೊಂದಿಗೆ ಈತನನ್ನು ಹಿಡಿದು ಕುಶಾಲನಗರ ಪೊಲೀಸರಿಗೆ ಮಾಹಿತಿ ನೀಡಿದರು. 

ಸನ್ಮಾನ
ಸಮಯ ಪ್ರಜ್ಞೆ ಮೆರೆದು ಆರೋಪಿಯನ್ನು ಬಂಧಿಸಲು ಸಹಕರಿಸಿದ ರಫೀಕ್ ಅವರನ್ನು ಕುಶಾಲನಗರ ಪೊಲೀಸ್ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. 
ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಮುರಳೀಧರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು. 

ಸನ್ಮಾನಿತ ರಫೀಕ್ ಮಾತನಾಡಿ ಆರೋಪಿಯನ್ನು ಸಾರ್ವಜನಿಕರ ಸಹಕಾರದಿಂದ ಹಿಡಿಯಲು ಸಾಧ್ಯವಾದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಆರಕ್ಷಕ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ. ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಹಾಗೂ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News