ಭೀಮಾ ಕೋರೆಗಾಂವ್ ಹೋರಾಟಗಾರರ ವಿರುದ್ಧ ಸಾಕ್ಷ್ಯಸೃಷ್ಟಿಗೆ 'ವಾಟ್ಸ್ಯಾಪ್ ಸ್ಪೈವೇರ್' ಬಳಕೆ

Update: 2019-10-31 09:45 GMT
ನಿಹಾಲ್‍ ಸಿಂಗ್ ರಾಥೋಡ್ 

ನಾಗ್ಪುರ್, ಅ.31: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಲವು ಹೋರಾಟಗಾರರನ್ನು ಬಂಧಿಸಲು ಸಾಕ್ಷ್ಯವೆಂದು ಪರಿಗಣಿಸಲಾದ ಪತ್ರಗಳನ್ನು ಸರಕಾರಿ ಏಜನ್ಸಿಗಳೇ 'ಸ್ಪೈವೇರ್' ಮೂಲಕ  ಸೇರಿಸಿರುವ ಸಾಧ್ಯತೆಯಿದೆಯೆಂದು ನಾಗ್ಪುರ್ ಮೂಲದ ವಕೀಲ ಹಾಗೂ  ಹ್ಯೂಮನ್ ರೈಟ್ಸ್ ಲಾ ನೆಟ್ವರ್ಕ್ ಮುಖ್ಯಸ್ಥ ನಿಹಾಲ್‍ ಸಿಂಗ್ ರಾಥೋಡ್ ಹೇಳಿದ್ದಾರೆ.

ಇಸ್ರೇಲಿ ಸ್ಪೈವೇರ್ 'ಪೆಗಾಸಸ್' ಮೂಲಕ  ಭಾರತದ ಹಲವು ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ದಲಿತ ಕಾರ್ಯಕರ್ತರ ಮೇಲೆ ನಿಗಾ ಇಡಲಾಗಿತ್ತೆಂದು ವಾಟ್ಸ್ಯಾಪ್ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಎನ್‍ಎಸ್‍ಇ ಗ್ರೂಪ್ ವಿರುದ್ಧ ದಾಖಲಿಸಿರುವ ಮೊಕದ್ದಮೆಯಲ್ಲಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ರಾಥೋಡ್ ಅವರ ಹೇಳಿಕೆ ಮಹತ್ವ ಪಡೆದಿದೆ.

ತಾನು ವಾಟ್ಸ್ಯಾಪ್ ಗೆ ಎಪ್ರಿಲ್ ತಿಂಗಳಿನಲ್ಲಿ ದೂರು ನೀಡಿದ್ದಾಗಿ ಹೇಳಿದ್ದ ರಾಥೋಡ್, ಅಕ್ಟೋಬರ್ 29ರಂದು ತನ್ನ ಮೇಲೆ ಸ್ಪೈವೇರ್ ನಿಗಾ ಇಟ್ಟಿರುವ ಕುರಿತಂತೆ ವಾಟ್ಸ್ಯಾಪ್ ಮಾಹಿತಿ ನೀಡಿತ್ತು ಎಂದಿದ್ದಾರೆ.

"ನಿಮ್ಮನ್ನೇಕೆ ಟಾರ್ಗೆಟ್ ಮಾಡಲಾಗಿತ್ತು?" ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಥೋಡ್, "ಇದು ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದ್ದಿರಬಹುದು. ನನ್ನ ಹಿರಿಯರಾದ (ವಕೀಲ) ಸುರೇಂದ್ರ ಗದ್ಲಿಂಗ್‍ ಗೆ ಕೂಡ ಇಂತಹುದೇ ಹಲವಾರು ಕರೆಗಳು ಹಾಗೂ ಸಂದೇಶಗಳು ಬರುತ್ತಿದ್ದವು ಹಾಗೂ ಈ ಮೂಲಕ ಆ ಪತ್ರಗಳನ್ನು ಸೇರಿಸಿರುವ ಸಾಧ್ಯತೆಯಿದೆ'' ಎಂದು ಅವರು ಹೇಳಿದ್ದಾರೆ. "ಸರಕಾರಿ ಏಜನ್ಸಿಗಳೇ ಈ ಮಾರ್ಗ ಅಥವಾ ಬೇರೆ ಮಾರ್ಗದ ಮೂಲಕ ಪತ್ರ ಇರಿಸಿರುವ ಸಾಧ್ಯತೆಯಿದೆ'' ಎಂದು ಅವರು ಹೇಳಿದ್ದಾರೆ.

ಆದಿವಾಸಿ ಹಕ್ಕುಗಳ ಕಾರ್ಯಕರ್ತೆ ಬೇಲಾ ಭಾಟಿಯಾ ಕೂಡ ತಮ್ಮ ಮೇಲೆ ಸ್ಪೈವೇರ್ ಮೂಲಕ ನಿಗಾ ಇಟ್ಟಿರುವ ಸಾಧ್ಯತೆಯ ಕುರಿತಂತೆ ವಾಟ್ಸ್ಯಾಪ್ ಮಾಹಿತಿ ನೀಡಿದೆ ಎಂದಿದ್ದಾರೆ.

ಸುರೇಂದ್ರ ಗದ್ಲಿಂಗ್ ಅವರು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪೊಲೀಸರು ಅವರ  ಕಂಪ್ಯೂಟರ್, ಪೆನ್ ಡ್ರೈವ್ ಹಾಗು ಮೆಮರಿ ಕಾರ್ಡುಗಳಿಂದ ಹಲವಾರು ಪತ್ರಗಳನ್ನು ವಶಪಡಿಸಿಕೊಂಡಿದ್ದಾಗಿ ಹೇಳಿದ್ದರು. ಜೂನ್ 2018ರಿಂದ ಈ ಪ್ರಕರಣ ಸಂಬಂಧ 10 ಹೋರಾಟಗಾರರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News