ರಾಜ್ಯದ ‘ಎ’ ದರ್ಜೆ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಕ್ಕೆ ಮುಹೂರ್ತ ನಿಗದಿ

Update: 2019-10-31 12:22 GMT

ಬೆಂಗಳೂರು, ಅ. 31: ಮುಂಬರುವ ಎಪ್ರಿಲ್ 26 ಮತ್ತು ಮೇ 24ರಂದು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ರಾಜ್ಯದ 90ರಿಂದ 100 ‘ಎ’ ದರ್ಜೆ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಧುವಿಗೆ ಬಂಗಾರದ ತಾಳಿ, ಧಾರೆ ಸೀರೆ ಖರೀದಿಸಲು 50 ಸಾವಿರ ರೂ.ಹಾಗೂ ವರನಿಗೆ ಮದುವೆ ವಸ್ತ್ರ ಖರೀದಿಗೆ 5 ಸಾವಿರ ರೂ.ಪ್ರೋತ್ಸಾಹ ಧನವನ್ನು ರಾಜ್ಯ ಸರಕಾರದಿಂದ ನೀಡಲಾಗುವುದು ಎಂದರು.

ಸಾಮೂಹಿಕ ವಿವಾಹಕ್ಕೆ 30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು. ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು. ಸೂಕ್ತ ದಾಖಲೆ ನೀಡಬೇಕು. ಎರಡನೆ ವಿವಾಹಕ್ಕೆ ಅವಕಾಶವಿಲ್ಲ. ವರನಿಗೆ 21, ವಧುವಿಗೆ 18 ವರ್ಷ ವಯಸ್ಸಾಗಿರಬೇಕು ಎಂದು ಅವರು ಹೇಳಿದರು.

ವಧು-ವರರ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನವನ್ನು ಜಮಾ ಮಾಡಲಾಗುತ್ತದೆ. ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ದೇವಾಲಯ, ಮೈಸೂರು ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ ಸೇರಿ ವಿವಿಧ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದ ಅವರು, 1 ಸಾವಿರ ಸಾಮೂಹಿಕ ನಡೆಯುವ ನಿರೀಕ್ಷೆ ಇದೆ ಎಂದರು.

ಶಿಶು ಕಲ್ಯಾಣ ಇಲಾಖೆಯಿಂದ ನವ ಜೋಡಿಗೆ 10ಸಾವಿರ ರೂ.ಬಾಂಡ್ ನೀಡಲಾಗುವುದು ಎಂದ ಕೋಟ ಶ್ರೀನಿವಾಸಪೂಜಾರಿ, ಹಿಂದೂ ಸಂಪ್ರದಾಯದಂತೆ ವಿವಾಹವಾಗುವವರಿಗೆ ಮಾತ್ರ ಈ ಸಾಮೂಹಿಕ ವಿವಾಹದಲ್ಲಿ ಮದುವೆ ಅವಕಾಶವಿದೆ ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.

ಪರಿಶೀಲನೆಗೆ ಸಮಿತಿ: ಮುಜರಾಯಿ ಇಲಾಖೆ ದೇವಾಲಯಗಳ ವತಿಯಿಂದ ನಡೆಯುತ್ತಿರುವ ಯಕ್ಷಗಾನ ಮೇಳಗಳ ಕಲಾವಿದರಿಗೆ ಗೌರವ ಸಂಭಾವನೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಗಿದ್ದು, ಪರಿಶೀಲಿಸಿ ಗೌರವ ಸಂಭಾವನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈಗಾಗಲೇ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ನೇತೃತ್ವದ ತಜ್ಞರ ಸಮಿತಿ ರಚಿಸಿದ್ದು, ಮೂರು ತಿಂಗಳಲ್ಲಿ ವರದಿ ತರಿಸಿಕೊಂಡು ಕಲಾವಿದರ ಗೌರವ ಸಂಭಾವನೆ ಹೆಚ್ಚಳ ಮಾಡಲಾಗುವುದು ಎಂದ ಅವರು, ಹಾರಾಡಿ ರಾಮ ಗಾಣಿಗ ಹೆಸರಲ್ಲಿ 1 ಲಕ್ಷ ರೂ.ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

ರಾಸಾಯನಿಕ ಮಿಶ್ರಿತ ಕುಂಕುಮ ನಿಷೇಧ

‘ಮುಜರಾಯಿ ದೇವಾಲಯಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ, ಶ್ರೀಗಂಧ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಬಣ್ಣದ ಆಕರ್ಷಣೆಗೆ ಕುಂಕುಮದಲ್ಲಿ ರಾಸಾಯನಿಕ ಬಳಕೆ ಮಾಡುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ’

-ಕೋಟ ಶ್ರೀನಿವಾಸಪೂಜಾರಿ ಮುಜರಾಯಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News