ಕೋಲಾರ: ಆರ್‌ಸಿಇಪಿ ಒಪ್ಪಂದ ವಿರೋಧಿಸಿ ರೈತ ಸಂಘ ಧರಣಿ

Update: 2019-10-31 18:31 GMT

ಕೋಲಾರ.ಅ,31: ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್.ಸಿ.ಇ.ಪಿ) ಮುಕ್ತ ಪ್ಯಾವಾರ ಒಪ್ಪಂದಕ್ಕೆ ಸಹಿ ಹಾಕುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಕೇಂದ್ರ ಸರ್ಕಾರ 15 ದೇಶಗಳೊಂದಿಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವುದು ಈ ದೇಶದ ರೈತರಿಗೆ ಮಾಡಿದ ದ್ರೋಹವಾಗಿದೆ. ಈ ಒಪ್ಪಂದದಿಂದ ದೇಶದ ಹಾಲು ಉತ್ಪಾದಕರಿಗೆ ನಷ್ಟ ಉಂಟಾಗಿ ಹೈನೋದ್ಯಮವನ್ನೇ ಕೈಬಿಟ್ಟು ಹೋಗುವ ಪರಿಸ್ಥಿತಿ ಉದ್ಭವವಾಗುತ್ತದೆ. ಈ ಒಪ್ಪಂದದಿಂದ ಯಾವುದೇ ತೆರಿಗೆ ಇಲ್ಲದೆ ಬೇರೆ ದೇಶಗಳ ಕೃಷಿ ಉತ್ಫನ್ನಗಳನ್ನು ದೇಶದಲ್ಲಿ ಮಾರಾಟ ಮಾಡುವುದರಿಂದ ಅವರ ಜೊತೆ ದೇಶದ ಕೃಷಿಕರು ಸ್ಪರ್ಧೆ ಮಾಡಲು ಸಾಧ್ಯವಾಗದೆ ಆರ್ಥಿಕವಾಗಿ ದಿವಾಳಿಯಾಗುತ್ತಾರೆ ಎಂದರು.

ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ಒಪ್ಪಂದ ಮಾಡಿಕೊಳ್ಳುವುದರಿಂದ ದೇಶದ ರೇಷ್ಮೆ, ಅಡಿಕೆ, ತೋಟಗಾರಿಕೆ ಬೆಳೆಗಳು, ಮಾವು, ಸಾಂಬಾರ ಪದಾರ್ಥಗಳು ಬೇರೆ ದೇಶದಿಂದ ತೆರಿಗೆ ಇಲ್ಲದೆ ನಮ್ಮ ದೇಶದಲ್ಲಿ ಮಾರಾಟವಾಗುವುದರಿಂದ ದೇಶದ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಬೆಳೆ ಬೆಳೆಯುವುದನ್ನೇ ಬಿಡುವುದರಿಂದ ದೇಶದ ಕೃಷಿ ನಾಶವಾಗುತ್ತದೆ. ಕೇಂದ್ರ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದರೆ ದೇಶದ ರೈತರ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸಂಚಾಲಕ ಬೆಡಶೆಟ್ಟಹಳ್ಳಿ ರಮೇಶ್, ಜಿಲ್ಲಾ ಉಪಾಧ್ಯಕ್ಷ ಬೈರಾರೆಡ್ಡಿ, ಮುಳಬಾಗಿಲು ತಾಲೂಕು ಅಧ್ಯಕ್ಷ ಪೆತ್ತಾಂಡ್ಲಹಳ್ಳಿ ಪಿ.ಎಸ್ ಗಂಗಾಧರ್, ಕೋಲಾರ ತಾಲೂಕು ಅಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್ ಇನ್ನಿತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣ್, ವರದಾಪುರ ಸಿ.ನಾಗರಾಜ್, ಕಾರ್ಯದರ್ಶಿಗಳಾದ ರವಿಕುಮಾರ್, ಹೊಳಲಿ ಹೊಸೂರು ಚಂದ್ರಪ್ಪ, ಮಾಲೂರು ತಾಲೂಕು ಅಧ್ಯಕ್ಷ ತಿಪ್ಪಸಂದ್ರ ಹರೀಶ್, ಕೆ.ಜಿ.ಎಫ್ ತಾಲೂಕು ಅಧ್ಯಕ್ಷ ಕಾರಿ ವಿಶ್ವನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಗೋಪಿನಾಥ್, ಅಂಗಡಿ ಶ್ರೀನಿವಾಸ್, ವಾನರಾಶಿ ಗೋಪಾಲ್, ನಾರಾಯಣಸ್ವಾಮಿ, ಮುನಿಯಪ್ಪ, ರಮೇಶ್, ನಂಜುಂಡಪ್ಪ, ಆನಂದ್, ಮಂಜುನಾಥ್, ಶಂಕರ್, ರಘುನಾಥಗೌಡ, ಶ್ರೀಕಾಂತ್‍ಗೌಡ, ಬಾಬು, ಹರೀಶ್‍ರೆಡ್ಡಿ, ದೇವರಾಜ್, ವೀರಪ್ಪರೆಡ್ಡಿ,  ನರಸಿಂಹರೆಡ್ಡಿ, ಶ್ರೀನಿವಾಸ್, ಮುರಳಿ, ಬಾಬು ಸೇರಿ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News