ಟ್ರಂಪ್ ವಿರುದ್ಧ ವಾಗ್ದಂಡನೆ ವಿಚಾರಣೆಗೆ ಅಸ್ತು

Update: 2019-11-01 03:42 GMT

ವಾಷಿಂಗ್ಟನ್, ನ.1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ವಿಚಾರಣೆಯನ್ನು ಕೈಗೊಳ್ಳುವ ಐತಿಹಾಸಿಕ ನಿರ್ಧಾರಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟಿವ್ಸ್ ಗುರುವಾರ ಅನುಮತಿ ನೀಡಿದೆ. ತನಿಖೆಯನ್ನು ಮುಂದಿನ ಹಂತಕ್ಕೆ ಒಯ್ಯಲು ಅನುಕೂಲ ಮಾಡಿಕೊಡುವ ನಿಯಮಾವಳಿ ಮತ್ತು ವಿಧಿವಿಧಾನಗಳಿಗೆ ಕೂಡಾ ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿರುವ ಸದನ ಒಪ್ಪಿಗೆ ಕೊಟ್ಟಿದೆ. ವಾಗ್ದಂಡನೆ ವಿಧಿಗಳು ಮತ್ತು ಪೂರ್ಣ ಪ್ರಮಾಣದ ವಾಗ್ದಂಡನೆ ವಿಚಾರಣೆ ರಿಪಬ್ಲಿಕನ್ ಪಕ್ಷದ ನಿಯಂತ್ರಣದಲ್ಲಿರುವ ಸೆನೆಟ್‌ನಲ್ಲಿ ನಡೆಯಲಿದೆ.

21ನೇ ಶತಮಾನದ ಮೊದಲ ವಾಗ್ದಂಡನೆ ವಿಚಾರಣೆಗೆ ಅನುಮತಿ ನೀಡುವ ಕುರಿತ ನಿರ್ಣಯ 232-196 ಮತಗಳಿಂದ ಆಂಗೀಕಾರವಾಯಿತು. ಈ ಮೂಲಕ ವಾಗ್ದಂಡನೆ ವಿಚಾರಣೆ ಎದುರಿಸಲಿರುವ ನಾಲ್ಕನೇ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾದರು. ಇದಕ್ಕೂ ಮುನ್ನ ಆಂಡ್ರೂ ಜಾನ್ಸನ್, ರಿಚರ್ಡ್ ನಿಕ್ಸನ್ ಮತ್ತು ಬಿಲ್ ಕ್ಲಿಂಟನ್ ವಾಗ್ದಂಡನೆ ವಿಚಾರಣೆ ಎದುರಿಸಿದ್ದರು. ಜಾನ್ಸನ್ ಹಾಗೂ ಕ್ಲಿಂಟನ್ ಅವರಿಗೆ ಕ್ರಮವಾಗಿ 1868 ಮತ್ತು 1998ರಲ್ಲಿ ವಾಗ್ದಂಡನೆ ವಿಧಿಸಲಾಗಿತ್ತು.

"ಅಮೆರಿಕದ ಇತಿಹಾಸದಲ್ಲೇ ಇದು ಅತಿದೊಡ್ಡ ಬೇಟೆ" ಎಂದು ಟ್ವಿಟ್ಟರಿಗರು ಈ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಅಧ್ಯಕ್ಷರು ಯಾವ ತಪ್ಪನ್ನೂ ಮಾಡಿಲ್ಲ ಎನ್ನುವುದು ಡೆಮಾಕ್ರಟಿಕ್ ಪಕ್ಷದವರಿಗೆ ಗೊತ್ತು. ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಈ ಕಾನೂನುಬಾಹಿರ ವಾಗ್ದಂಡನೆ ಪ್ರಕ್ರಿಯೆ ಆರಂಭಿಸಲು ಮುಂದಾಗಿರುವುದರಿಂದ ಟ್ರಂಪ್ ಅವರಿಗೆ ಯಾವುದೇ ಹಾನಿ ಇಲ್ಲ; ಆದರೆ ಅಮೆರಿಕದ ಪ್ರಜೆಗಳಿಗೆ ನೋವಾಗಿದೆ" ಎಂದು ಶ್ವೇತಭವನ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News