ಭಾರತದಲ್ಲಿ 6 ವರ್ಷಗಳಲ್ಲಿ 90 ಲಕ್ಷ ಉದ್ಯೋಗ ನಷ್ಟ!

Update: 2019-11-01 16:46 GMT

ಹೊಸದಿಲ್ಲಿ,ನ.2: ದೇಶದಲ್ಲಿ 2011-12ರಿಂದ 2017-18ರವರೆಗೆ ಸುಮಾರು 90 ಲಕ್ಷ ಉದ್ಯೋಗಗಳು ನಷ್ಟವಾಗಿವೆಯೆಂಬ ಆತಂಕಕಾರಿ ವಿಷಯವನ್ನು ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸುಸ್ಥಿರ ಉದ್ಯೋಗ ಕೇಂದ್ರವು ಪ್ರಕಟಿಸಿದ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಭಾರತದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕುಸಿದಿರುವುದು ಇದೇ ಮೊದಲ ಸಲವೆಂದು ಸಂತೋಷ್ ಮೆಹ್ರೋತ್ರಾ ಹಾಗೂ ಜಜಾತಿ ಕೆ. ಪರಿಡಾ ರಚಿಸಿರುವ ಅಧ್ಯಯನ ವರದಿ ಹೇಳಿದೆ.2011-13ರಲ್ಲಿ 47.40 ಕೋಟಿಯಷ್ಟಿದ್ದ ಉದ್ಯೋಗಗಳ ಸಂಖ್ಯೆಯು 2017-18ರಲ್ಲಿ 46.50 ಕೋಟಿಗೆ ಕುಸಿದಿರುವುದಾಗಿ ಅದು ಹೇಳಿದೆ.

 ದೇಶದಲ್ಲಿ ಒಟ್ಟು ಉದ್ಯೋಗದ ಪ್ರಮಾಣದಲ್ಲಿ ಭಾರೀ ಕುಸಿತವುಂಟಾಗಿರುವ ಹಾಗೂ ನಿರುದ್ಯೋಗಿ ಯುವಜನರ ದೊಡ್ಡ ಪಡೆಯೊಂದು ಬೃಹತ್ ಸಂಖ್ಯೆಯಲ್ಲಿ ಏರುತ್ತಿರುವುದನ್ನು ದೃಢಪಡಿಸುವ ಮೊತ್ತ ಮೊದಲ ಅಧಿಕೃತ ದತ್ತಾಂಶ ಇದಾಗಿದೆ.

  ಸರಕಾರಿ ಹಾಗೂ ಖಾಸಗಿ ರಂಗದ ಉದ್ಯೋಗಗಳನ್ನು ಗುತ್ತಿಗೆಯಾಧಾರಿತಗೊಳಿಸುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಕೂಡಾ ಈ ಅಂಕಿಅಂಶಗಳು ತೋರಿಸಿಕೊಟ್ಟಿ ವೆ.

ಕೃಷಿರಂಗದಲ್ಲಿ ಉದ್ಯೋಗದ ಪ್ರಮಾಣವು 2011-12 ಹಾಗೂ 2017-18ರ ಸಾಲಿನಲ್ಲಿ ವಾರ್ಷಿಕವಾಗಿ 40.50 ಲಕ್ಷ ಕುಸಿತವನ್ನು ಕಂಡಿದೆ. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗದ ಪ್ರಮಾಣದಲ್ಲಿ ಶೇ.49ರಿಂದ ಶೇ.44ರಷ್ಟು ಕುಸಿತವಾಗಿತ್ತು.

 ಕಾರ್ಮಿಕ ಅಧಿಕವಿರುವ ಉತ್ಪಾದನಾ ರಂಗದಲ್ಲಿ ಈ ಅವಧಿಯಲ್ಲಿ 30.50 ಲಕ್ಷ ಉದ್ಯೋಗಗಳು ನಷ್ಟವಾಗಿವೆ. ದೇಶದ ಒಟ್ಟು ಉದ್ಯೋಗಗಳ ಸಂಖ್ಯೆಯಲ್ಲಿ ಉತ್ಪಾದನಾ ವಲಯದ ಪಾಲು ಶೇ.12.6ರಿಂದ ಶೇ.12.1ಕ್ಕೆ ಇಳಿದಿದೆ. ದೇಶದ ಉತ್ಪಾದನಾ ವಲಯದಲ್ಲಿ ಉದ್ಯೋಗಳು ಕುಸಿದಿರುವುದು ದೇಶದ ಇತಿಹಾಸದಲ್ಲಿ ಇದು ಮೊದಲ ಸಲವಾಗಿದೆ. ಉತ್ಪಾದನಾ ವಲಯದಲ್ಲಿ ಉದ್ಯೋಗದ ಕುಸಿತವು ಮೋದಿ ಸರಕಾರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಆಶಯಕ್ಕೆ ವಿರುದ್ಧವಾದ ಬೆಳವಣಿಗೆಯಾಗಿದೆ ಎಂದು ಅಧ್ಯಯನ ವರದಿ ಅಭಿಪ್ರಾಯಿಸಿದೆ.

 ಈ ವರದಿಯ ರಚನಕಾರರಾದ ಮೆಹ್ರೋತ್ರಾ ಅವರು ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರೆ, ಪರಿಡಾ ಅವರು ಪಂಜಾಬ್‌ನ ಕೇಂದ್ರೀಯ ವಿವಿಯಲ್ಲಿ ಉಪನ್ಯಾಸಕರಾಗಿದ್ದಾರೆ.

 ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿಯೂ ಉದ್ಯೋಗದ ಬೆಳವಣಿಗೆಯಲ್ಲಿ ಹಿಂಜರಿತ ವುಂಟಾಗಿದೆ. ಉತ್ಪಾದನೇತರ ಕ್ಷೇತ್ರಗಳಲ್ಲಿ (ಬಹುತೇಕ ಕಟ್ಟಡ ನಿರ್ಮಾಣ) 2004-05ರಿಂದ 2011-12ರ ಅವಧಿಯಲ್ಲಿ ಪ್ರತಿ ವರ್ಷವೂ 40 ಲಕ್ಷ ಉದ್ಯೋಗಳು ಸೃಷ್ಟಿಯಾಗಿದ್ದವು. ಆದರೆ 2011-12 ಹಾಗೂ 2017-18ರ ಅವಧಿಯಲ್ಲಿ 6 ಲಕ್ಷ ಉದ್ಯೋಗಗಳು ಮಾತ್ರವೇ ಸೃಷ್ಟಿಯಾಗಿದ್ದವು. ಸೇವಾ ಕ್ಷೇತ್ರದಲ್ಲಿ ಮಾತ್ರ ಉದ್ಯೋಗ ಬೆಳವಣಿಗೆಯಲ್ಲಿ ಸ್ಥಿರತೆ ಕಂಡುಬಂದಿದೆ. 2011-12 ಹಾಗೂ 2017-18ರ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನಿಯಮಿತವಾಗಿ ವೇತನ ಪಡೆಯುವ ಕಾರ್ಮಿಕರ ಸಂಖ್ಯೆಯಲ್ಲಿ 1.73 ಕೋಟಿಯಷ್ಟು ಏರಿಕೆಯಾಗಿದೆ.

ಕೇಂದ್ರ ಸರಕಾರ ಪ್ರಾಯೋಜಿತ ವರದಿಗಿಂತ ತೀರಾ ವ್ಯತಿರಿಕ್ತ!

  ಸಂತೋಷ್ ಮೆಹ್ರೋತ್ರಾ ಹಾಗೂ ಜಜಾತಿ ಕೆ. ಪರಿಡಾ ಅವರ ಇತ್ತೀಚಿನ ಈ ಅಧ್ಯಯನ ವರದಿಯ ಅಂಕಿಅಂಶಗಳು, ಪ್ರಧಾನಿಯವರ ಅರ್ಥಿಕ ಸಲಹಾ ಮಂಡಳಿಯಿಂದ ನಿಯೋಜಿಸಲ್ಪಟ್ಟಿದ್ದ ಲವೀಶ್ ಭಂಡಾರಿ ಹಾಗೂ ಅಮರೇಶ್ ದುಬೆ ಅವರು ನಡೆಸಿದ್ದ ಅಧ್ಯಯನವರದಿಗಿಂತ ತೀರಾ ವ್ಯತಿರಿಕ್ತವಾಗಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ನ ಸುದ್ದಿಜಾಲತಾಣ ವರದಿ ಮಾಡಿದೆ.

ಲವೀಶ್ ಭಂಡಾರಿ ಹಾಗೂ ಅಮರೇಶ್ ದುಬೆ ಅವರ ವರದಿಯು 2011-12ರಲ್ಲಿ 43.30 ಕೋಟಿಯಷ್ಟಿದ್ದ ಉದ್ಯೋಗಗಳ ಸಂಖ್ಯೆಯು 2017-18ರ ಸಾಲಿನಲ್ಲಿ 45.70 ಕೋಟಿಗೆ ಏರಿಕೆಯಾಗಿದೆಯೆಂದು ತಿಳಿಸಿತ್ತು. ಆದರೆ ಲವೀಶ್ ಹಾಗೂ ಅಮರೇಶ್ ಅವರ ಅಧ್ಯಯನ ವರದಿಯು 2011-13ರಲ್ಲಿ 47.40 ಕೋಟಿಯಷ್ಟಿದ್ದ ಉದ್ಯೋಗಗಳ ಸಂಖ್ಯೆಯು 2017-18ರಲ್ಲಿ 46.50 ಕೋಟಿಗೆ ಕುಸಿದಿರುವುದಾಗಿ ತಿಳಿಸಿರುವುದು ಕೇಂದ್ರ ಸರಕಾರ ಪ್ರಾಯೋಜಿತ ವರದಿಯ ವಸ್ತುನಿಷ್ಠತೆಯನ್ನು ಪ್ರಶ್ನಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News