ಮಡಿಕೇರಿ: 50 ಅಡಿ ಆಳಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್; ತಪ್ಪಿದ ಭಾರೀ ಅನಾಹುತ

Update: 2019-11-02 14:36 GMT

ಮಡಿಕೇರಿ ನ.2 : ಕೆಎಸ್‌ಆರ್‌ಟಿಸಿ ಬಸ್ಸೊಂದು ಬ್ರೇಕ್ ಫೇಲ್ ಆಗಿ ಬೇರೊಂದು ವಾಹನಕ್ಕೆ ಢಿಕ್ಕಿ ಹೊಡೆದು 50 ಅಡಿ ಆಳದ ಪ್ರಪಾತಕ್ಕೆ ಉರುಳಿದ ಘಟನೆ ಮಡಿಕೇರಿ ಹೊರವಲಯದ ಸ್ಯಾಂಡಲ್‌ಕಾಡ್ ಬಳಿ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ. 

ಪ್ರಪಾತದ ಕಾಫಿ ತೋಟದಲ್ಲಿ ಸಂಪೂರ್ಣ ನೀರಿನಿಂದ ಭರ್ತಿಯಾಗಿದ್ದ ದೊಡ್ಡ ಕೆರೆಯೂ ಇದ್ದು, ಬಸ್ ಬ್ರೇಕ್ ಫೇಲ್ ಆದ ಸಮಯದಲ್ಲೂ ಬಸ್ ಅನ್ನು ಕೆರೆಗೆ ಬೀಳದಂತೆ ನಿಯಂತ್ರಿಸಿದ್ದಾರೆ. ಬಸ್ ಚಾಲಕನ ಪ್ರಜ್ಞೆಯಿಂದಾಗಿ ಮುಂದಾಗಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಬಸ್ ಢಿಕ್ಕಿಯಿಂದಾಗಿ ಚಾವರ್ಲೆಟ್ ವಾಹನದ ಹಿಂಭಾಗ ಜಖಂ ಆಗಿದ್ದು, ಈ ವಾಹನದಲ್ಲಿದ್ದವರೂ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News