ಮಹಾನ್ ರಾಷ್ಟ್ರ ನಾಯಕರನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ಆರೆಸ್ಸೆಸ್‌

Update: 2019-11-02 15:50 GMT

ಹೊಸದಿಲ್ಲಿ,ನ.2: ಭಾರತದ ಜನತೆ ಸ್ಪಂದಿಸುವಂತಹ ನಾಯಕನನ್ನು ಆರೆಸ್ಸೆಸ್ ಹೊಂದಿಲ್ಲದಿರುವುದರಿಂದ ಅದು ಸರ್ದಾರ್ ಪಟೇಲ್, ಭಗತ್ ಸಿಂಗ್ ಹಾಗೂ ಸುಭಾಶ್‌ಚಂದ್ರ ಭೋಸ್‌ರಂತಹ ಮಹಾನ್ ರಾಷ್ಟ್ರ ನಾಯಕರನ್ನು ಬಳಸಿಕೊಳ್ಳುತ್ತಿದೆಯೆಂದು ಖ್ಯಾತಿ ಇತಿಹಾಸಕಾರ ಹಾಗೂ ಲೇಖಕ ಎಸ್.ಇರ್ಫಾನ್ ಹಬೀಬ್ ಶನಿವಾರ ಆಪಾದಿಸಿದ್ದಾರೆ.

‘‘ಸರ್ದಾರ್ ಪಟೇಲ್ , ಸುಭಾಶ್‌ಚಂದ್ರ ಭೋಸ್ ಅಥವಾ ಭಗತ್‌ಸಿಂಗ್ ಆಗಿರಲಿ ಆರೆಸ್ಸೆಸ್, ಮಹಾನ್ ರಾಷ್ಟ್ರೀಯ ನಾಯಕರನ್ನು ಸದಾಕಾಲವೂ ಬಳಸಿ ಕೊಳ್ಳುತ್ತಾ ಬಂದಿದೆ. ಆದರೆ ಅವರು (ಆರೆಸ್ಸೆಸ್) ತಮ್ಮವನೆಂದು ಹೇಳಬಹು ದಾದಂತಹ ಒಬ್ಬನೇ ಒಬ್ಬ ಮಹಾನ್ ವ್ಯಕ್ತಿಯ ಹೆಸರನ್ನು ಹೇಳಿ ನೋಡುವಾ...” ಎಂದು ಹಬೀಬ್ ಸವಾಲೆಸೆದಿದ್ದಾರೆ.

ಹೊಸದಿಲ್ಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದಲ್ಲಿ ನಡೆಯುತ್ತಿರುವ ಸಾಹಿತ್ಯ ಆಜ್‌ತಕ್ ಸಮೇಳನದ ಅಂಗವಾಗಿ ಆಯೋಜಿಸಲಾದ ‘ಸಾವರ್ಕರ್ ಹಾಗೂ ಹಿಂದುತ್ವ’ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಭಾರತದ ಜನತೆಯೊಂದಿಗೆ ನಂಟು ಕಲ್ಪಿಸಬಲ್ಲಂತಹ ಒಬ್ಬನೇ ಒಬ್ಬ ವ್ಯಕ್ತಿ ಅವರ ಬಳಿಯಿಲ್ಲ ಎಂದು ಹಬೀಬ್ ಹೇಳಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೆಸ್ಸೆಸ್ ಚಿಂತಕ, ಇದಕ್ಕುತ್ತರಿಸುತ್ತಾ ಕಾಂಗ್ರೆಸ್ ನೇತೃತ್ವದ ಹಿಂದಿನ ಸರಕಾರಗಳು ಈ ರಾಷ್ಟ್ರೀಯ ನಾಯಕರನ್ನು ಕಡೆಗಣಿ ಸಿದ್ದು, ಅವರನ್ನು ಜನ ಮರೆಯದಂತೆ ಆರೆಸ್ಸೆಸ್ ನೋಡಿಕೊಳ್ಳುತ್ತಿದೆ ಎಂದರು.

‘‘ಪಟೇಲ್ ಅಥವಾ ಸಾವರ್ಕರ್ ಅವರಿಗೆ ಕಾಂಗ್ರೆಸ್ 70 ವರ್ಷಗಳಿಂದ ಸಲ್ಲಿಸಲು ಬಾಕಿಯಿದ್ದ ಗೌರವವನ್ನು ಈತನಕ ಯಾರೂ ಪಾವತಿಸಿರಲಿಲ್ಲ. ಆ ಕೆಲಸ ವನ್ನು ಈಗ ಆರೆಸ್ಸೆಸ್ ಮಾಡುತ್ತಿದೆ. ಅವರೆಲ್ಲರೂ ಮಹಾನ್ ರಾಷ್ಟ್ರ ನಾಯಕರಾಗಿದ್ದಾರೆ ಮತ್ತು ನಾವು ಅವರನ್ನು ಮರೆಯಕೂಡದು’’ ಎಂದು ನಿಗಮ್ ಹೇಳಿದರು.

ಇತ್ತೀಚೆಗೆ ಮಹಾರಾಷ್ಟ್ರ ಬಿಜೆಪಿ ಘಟಕವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದೂ ರಾಷ್ಟ್ರೀಯವಾದಿ ನಾಯಕ ವಿನಾಯಕ ಸಾವರ್ಕರ್ ಅವರಿಗೆ ಭಾರತರತ್ನವನ್ನು ನೀಡುವ ಪ್ರಸ್ತಾವ ಮಾಡಿರುವುದು, ಪ್ರತಿಪಕ್ಷಗಳ ತೀವ್ರ ಟೀಕೆಗೆ ಗ್ರಾಸವಾಗಿತ್ತು.

ಸಮಾವೇಶದಲ್ಲಿ ನಿಗಮ್ ಅವರು ಸಾವರ್ಕರ್ ಭಾರತರತ್ನ ಪುರಸ್ಕಾರಕ್ಕೆ ಅರ್ಹರೆಂದು ಹೇಳಿದ್ದಾರೆ. ಆರೆಸ್ಸೆಸ್ ತನ್ನವರಿಗೆ ಪ್ರಶಸ್ತಿ ನೀಡಬೇಕೆಂದು ಎಂದೂ ಬೇಡಿಕೆ ಮಂಡಿಸಿರಲಿಲ್ಲ. ಅರೆಸ್ಸೆಸ್ ನಾಯಕರಾದ ಗೊಳ್ವಾಲ್ಕರ್ ಹಾಗೂ ಹೆಡ್ಗೆವಾರ್ ಅವರು ಎಂದೂ ಪ್ರಶಸ್ತಿಯನ್ನು ಬಯಸಿದವರಲ್ಲ ಎಂದು ನಿಗಮ್ ಹೇಳಿದರು.

ಇತ್ತೀಚೆಗೆ ಸಾವರ್ಕರ್ ಕುರಿತ ಪುಸ್ತಕಕೃತಿಯನ್ನು ಪ್ರಕಟಿಸಿರುವ ಪತ್ರಕರ್ತ ಹಾಗೂ ಲೇಖ ವೈಭವ್ ಪುರಂಧರೆ ಮಾತನಾಡಿ ಆರೆಸ್ಸೆಸ್ ಸ್ಥಾಪಕ ಹೆಡ್ಗೆವಾರ್ ಅವರು ಸಾವರ್ಕರ್ ಅವರ ಹಿಂದುತ್ವ ಸಿದ್ಧಾಂತದಿಂದ ಪ್ರೇರಿತರಾಗಿದ್ದರೆಂದು ಹೇಳಿದರು.

ಆರೆಸ್ಸೆಸ್‌ನ ಇತಿಹಾಸದಲ್ಲಿ ಸ್ವಾತಂತ್ರ್ಯ ನಾಯಕರ ಕೊರತೆಯಿರುವುದರಿಂದ, ಅದು ರಾಷ್ಟ್ರೀಯವಾದಿ ಮಹಾನ್ ನಾಯಕರತ್ತ ವಾಲಿದೆಯೆಂದು ಪುರಂಧರೆ ಅಭಿಪ್ರಾಯಿಸಿದರು. ಖ್ಯಾತ ಪತ್ರಕರ್ತರಾದ ಅಶುತೋಷ್ ಹಾಗೂ ನಿಲಾಂಜನ್ ಮುಖ್ಯೋಪಾಧ್ಯಾಯ್ ಕೂಡಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News