ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಗೆ ಮೊಟ್ಟೆಯೇ ಮದ್ದು: ನೂತನ ಸಮೀಕ್ಷೆ

Update: 2019-11-02 16:36 GMT

ಹೊಸದಿಲ್ಲಿ, ನ.2: ದೇಶದಲ್ಲಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಪೌಷ್ಟಿಕತೆಯು ಹೆಚ್ಚಿನ ಮಟ್ಟದಲ್ಲಿದೆ ಎನ್ನುವುದು ಆರೋಗ್ಯ ಸಚಿವಾಲಯದ ನೂತನ ಸಮೀಕ್ಷೆಯಲ್ಲಿ ಕಂಡುಬಂದಿದೆ.

ಸಮೀಕ್ಷೆಗೊಳಪಡಿಸಲಾಗಿದ್ದ ಎರಡು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿ ಕೇವಲ ಶೇ.6.4ರಷ್ಟು ಮಕ್ಕಳು ಮಾತ್ರ ಕನಿಷ್ಠ ಸ್ವೀಕಾರಾರ್ಹ ಆಹಾರದ ಭಾಗ್ಯವನ್ನು ಪಡೆದಿದ್ದರು. ಐದರಿಂದ ಒಂಭತ್ತು ವರ್ಷ ವಯೋಮಾನದ ಮಕ್ಕಳ ಪೈಕಿ ಶೇ.20ರಷ್ಟು ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಂಡಿದ್ದು,ವಯಸ್ಸಿಗೆ ಹೋಲಿಸಿದರೆ ಕಡಿಮೆ ಎತ್ತರವನ್ನು ಹೊಂದಿದ್ದಾರೆ. 10ರಿಂದ 19 ವರ್ಷದ ನಡುವಿನ ಹದಿಹರೆಯದವರ ಪೈಕಿ ಶೇ.25ರಷ್ಟು ಮಕ್ಕಳು ತಮ್ಮ ವಯಸ್ಸಿಗೆ ಹೋಲಿಸಿದರೆ ಕೃಶದೇಹ ಹೊಂದಿದ್ದಾರೆ ಎಂದೂ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

2016-2018ರ ನಡುವೆ ನಡೆಸಲಾದ ಸಮಗ್ರ ರಾಷ್ಟ್ರೀಯ ಪೌಷ್ಟಿಕತೆ ಸರ್ವೇಕ್ಷಣೆಗಾಗಿ ದಿಲ್ಲಿ ಮತ್ತು 29 ರಾಜ್ಯಗಳ 0-19 ವರ್ಷಗಳ ನಡುವಿನ 1.1 ಲಕ್ಷ ಮಕ್ಕಳು ಮತ್ತು ಹದಿಹರೆಯದವರ ಪ್ರಾತಿನಿಧಿಕ ಮಾದರಿಯ ಪೌಷ್ಟಿಕತೆ ದತ್ತಾಂಶಗಳನ್ನು ಸಂಗ್ರಹಿಸಲಾಗಿತ್ತು. ಇವರೆಲ್ಲ ತಮ್ಮ ಆಹಾರದಲ್ಲಿ ಏನು ಸೇವಿಸುತ್ತಾರೆ ಎಂಬ ಮಾಹಿತಿಗಳನ್ನೂ ಕ್ರೋಡೀಕರಿಸಲಾಗಿತ್ತು.

ಇವೆರಡೂ ದತ್ತಾಂಶಗಳನ್ನು ಪರಸ್ಪರ ತಾಳೆ ಹಾಕಿದಾಗ ಮಾಂಸಾಹಾರವನ್ನು ಸೇವಿಸುವವರು ಸಸ್ಯಾಹಾರಿಗಳಿಗಿಂತ ಉತ್ತಮ ಪೌಷ್ಟಿಕತೆ ಹೊಂದಿರುವುದು ಕಂಡು ಬಂದಿದೆ. ಹೆಚ್ಚಿನ ರಾಜ್ಯಗಳಲ್ಲಿ,ವಿಶೇಷವಾಗಿ ಎಳೆಯ ಮಕ್ಕಳಲ್ಲಿ ಮೊಟ್ಟೆಗಳ ಸೇವನೆಗೂ ಉತ್ತಮ ಪೌಷ್ಟಿಕತೆಗೂ ಪರಸ್ಪರ ಸಂಬಂಧವಿರುವುದು ಹೆಚ್ಚು ಮಹತ್ವಪೂರ್ಣವಾಗಿದೆ.

ಸರಕಾರಿ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಮಧ್ಯಾಹ್ನದೂಟದಲ್ಲಿ ಮೊಟ್ಟೆಗಳನ್ನು ನೀಡಬೇಕೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯ ಈ ಫಲಿತಾಂಶ ಮಹತ್ವವನ್ನು ಪಡೆದುಕೊಂಡಿದೆ. ಮೊಟ್ಟೆಗಳ ಸೇವನೆಯು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು,ಅದು ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಡೆಯುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳೂ ತೋರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News