ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಮಾಡಿ ವಿಪಕ್ಷ ನಾಯಕನಾಗಿದ್ದಾರೆ: ಸಂಸದೆ ಶೋಭಾ ಆರೋಪ

Update: 2019-11-02 16:45 GMT

ಚಿಕ್ಕಮಗಳೂರು, ನ.2: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಲ್ಯಾಕ್‌ಮೇಲ್ ಮಾಡಿ ವಿರೋಧ ಪಕ್ಷದ ನಾಯಕ ಸ್ಥಾನ ಪಡೆದುಕೊಂಡಿದ್ದಾರೆ. ಸುಳ್ಳು ಅಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದರೆ ಸುಳ್ಳು ಎನ್ನುವ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರಕಾರ 100 ದಿನಗಳ ಸಾಧನೆ ಶೂನ್ಯ ಎಂದಿರುವ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿದ್ದರು. ಆಗ ಅವರ ಸಾಧನೆ ಏನು ಎಂಬುದನ್ನು ತಿಳಿಸಲಿ. ಜಾತಿ ಮತ್ತು ಧರ್ಮಗಳನ್ನು ಒಡೆದಿರುವುದು ಸಿದ್ಧರಾಮಯ್ಯನವರ ಸಾಧನೆ. ಜಾತಿ, ಧರ್ಮ ಒಡೆದಿದ್ದು, ಮಕ್ಕಳ ಪ್ರವಾಸದಲ್ಲೂ ಜಾತಿ ಬೆರೆಸಿರುವುದು ಅವರ ಐದು ವರ್ಷಗಳ ಸಾಧನೆ ಎಂದು ಟೀಕಿಸಿದರು.

ಸಿದ್ದರಾಮಯ್ಯನವರು ಕಾರಿನಿಂದ ಇಳಿದು ಹಳ್ಳಿಗಳ ಕಡೆ ಮುಖ ಮಾಡಿ ಜನರನ್ನು ಮಾತನಾಡಿಸಲಿ. ಜನತೆಗೆ ತಾವು ನೀಡಿರುವ ಕೊಡುಗೆ ಏನು ಎಂಬುದನ್ನು ಪ್ರಶ್ನಿಸಲಿ. ಆಗ ಜನರೇ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದ ಅವರು, ದಶಕಗಳ ನಂತರ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯನವರಿಗೆ ಐದು ವರ್ಷದ ಆಡಳಿತಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಆದರೆ ಸಾಧನೆ ಏನು? ನಿಜವಾಗಿ ಸಾಧನೆ ಮಾಡಿದ್ದರೆ ಸಮ್ಮಿಶ್ರ ಸರಕಾರ ಏಕೆ ಬೀಳುತ್ತಿತ್ತು ಶೋಭಾ ಇದೇ ವೇಳೆ ಪ್ರಶ್ನಿಸಿದರು.

ಅನ್ನಭಾಗ್ಯ ಕೇಂದ್ರದ್ದು, ಅಲ್ಲಿಂದ ಅಕ್ಕಿ, ಗೋಧಿ ನೀಡಿದ್ದರಿಂದ ಕಾಂಗ್ರೆಸ್ ಸರಕಾರ ಬಡವರಿಗೆ ವಿತರಣೆ ಮಾಡಲು ಸಾಧ್ಯವಾಯಿತು. ಅದನ್ನು ಮರೆತಿರುವ ಸಿದ್ದರಾಮಯ್ಯ ಅನ್ನಭಾಗ್ಯ ನಮ್ಮದ್ದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ, ಸಿದ್ದರಾಮಯ್ಯ ಅವರ ಸ್ವಂತ ಸಾಧನೆ ಏನೆಂಬುದನ್ನು ನೆನಪು ಮಾಡಿಕೊಳ್ಳಬೇಕು. ಮಧ್ಯಂತರ ಚುನಾವಣೆ ಬಳಿಕ ಬಿಜೆಪಿ ಸರಕಾರ ಬೀಳುತ್ತದೆ ಎಂಬುದು ಸಿದ್ದರಾಮಯ್ಯನವರ ಭ್ರಮೆ. ಬಿಜೆಪಿ ಸರಕಾರ ಪತನವಾಗುತ್ತದೆ ಎಂದು ಸಿದ್ದರಾಮಯ್ಯ ಹಗಲುಕನಸು ಕಾಣುತ್ತಿದ್ದಾರೆ ಎಂದು ಸಂಸದೆ ಶೋಭಾ ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಂದು ಸಂಪೂರ್ಣ ನಿರ್ನಾಮವಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣ. ಅದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದ ಸಂಸದೆ ಶೋಭಾ, ಶಾಸಕ ಸ್ಥಾನಕ್ಕೆ 17 ಮಂದಿ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಸರಕಾರ ರಚನೆಗೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿರುವುದು ಸತ್ಯ. ಅವರ ಬೆಂಬಲಕ್ಕೆ ನಾವು ಇದ್ದೇವೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಶಾಸಕರ 17 ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿಜೆಪಿ ಅಭ್ಯರ್ಥಿಯಾಗಿದ್ದವರು ಉತ್ತಮ ಮತಗಳನ್ನೆ ಪಡೆದುಕೊಂಡಿದ್ದರು. ಆ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಅಪೇಕ್ಷಿಸಿ ಟಿಕೆಟ್ ಆಕಾಂಕ್ಷಿಗಳಾಗಿರುವುದರಲ್ಲಿ ತಪ್ಪೇನಿಲ್ಲ. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ ಬೆನ್ನಿಗೆ ನಾವೆಲ್ಲ ನಿಲ್ಲಬೇಕಾಗಿದೆ. ಪಕ್ಷ ಟಿಕೆಟ್ ಘೋಷಣೆ ಮಾಡಿದರೆ ಆ ಮೇಲೆ ಸಮಸ್ಯೆ ಇರುವುದಿಲ್ಲ. ನಾವೆಲ್ಲ ಒಟ್ಟಿಗೆ ಇರುತ್ತೇವೆಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News