ಮಂಡ್ಯ: ನೇಣು ಬಿಗಿದು ರೈತ ಆತ್ಮಹತ್ಯೆ

Update: 2019-11-02 16:56 GMT

ಮಂಡ್ಯ, ನ.2: ರೈತರೊಬ್ಬರು ತನ್ನ ಜಮೀನಿನ ಬಳಿ ಶನಿವಾರ ಮುಂಜಾನೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಲಿವಾನ ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸ್ ಅವರ ಪುತ್ರ ಮಂಜುನಾಥ್(41) ಸಾವನ್ನಪ್ಪಿದ ರೈತ. ಕಟಾವಿಗೆ ಬಂದಿದ್ದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಪರವಾನಗಿ (ಪರ್ಮಿಟ್) ದೊರೆಯುವುದು ವಿಳಂಬವಾದ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮೂರು ಎಕರೆ ಜಮೀನಿನಲ್ಲಿ ಬೆಳೆದು ನಿಂತಿರುವ 14 ತಿಂಗಳ ಕಬ್ಬು ತೆಗೆದುಕೊಳ್ಳುವಂತೆ ಕೊಪ್ಪದ ಎನ್.ಎಸ್.ಎಲ್ ಹಾಗೂ ನಂಜನಗೂಡಿನ ಬಣ್ಣಾರಿ ಅಮ್ಮನ್ ಕಾರ್ಖಾನೆಗಳ ಪರ್ಮಿಟ್ ಕಾದಿದ್ದರು. ಆದರೆ, ನಾಳೆ ನಾಳೆ ಎಂಬ ಉತ್ತರ ಬರುತ್ತಿತ್ತು. ಅನಾರೋಗ್ಯದಿಂದ ತಂದೆ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದರು. ಸಾಲದ ಸುಳಿಗೆ ಸಿಲುಕಿದ್ದ ಇವರು ಕಬ್ಬು ಖಾಲಿಯಾಗದಿದ್ದರೆ ಗತಿಯೇನು ಎಂಬ ಆತಂಕಕ್ಕೆ ಸಿಲುಕಿದ್ದರು ಎಂದು ತಿಳಿದು ಬಂದಿದೆ.

ಇಂದು ಮುಂಜಾನೆ 4 ಗಂಟೆಯ ವೇಳೆ ಮನೆಯಿಂದ ಹೊರಟು ಜಮೀನಿನ ಬಳಿಗೆ ಹೋಗಿದ್ದರು. ಬೆಳಗ್ಗೆ 6 ಗಂಟೆಯಲ್ಲಿ ಇತರೆ ರೈತರು ಜಮೀನಿನ ಬಳಿ ಹೋದಾಗ ಮೃತದೇಹ ಕಂಡು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News