ದಲಿತರ ಬದುಕನ್ನು ತೆರೆದಿಡುವ-ಜಾನಪದ

Update: 2019-11-04 18:30 GMT

ಕನ್ನಡ ಸಾಹಿತ್ಯ ಪರಿಷತ್ತು ಹೊರತರುತ್ತಿರುವ ದಲಿತ ಸಾಹಿತ್ಯ ಸಂಪುಟ ಮಾಲೆಯ ಪ್ರಮುಖ ಕೃತಿಯಾಗಿದೆ ‘ದಲಿತ ಜಾನಪದ’. ಸ್ವಾತಂತ್ರಾನಂತರ ಅಕ್ಷರ ಲೋಕಕ್ಕೆ ಪಾದಾರ್ಪಣೆ ಮಾಡಿದ ದಲಿತ ಶೋಷಿತ ಸಮುದಾಯ ಎಪ್ಪತ್ತರ ದಶಕ ಸ್ನಾತಕ-ಸ್ನಾತಕೋತ್ತರ ಪದವಿಯೊಂದಿಗೆ ಅಂಬೆಗಾಲು ಇಡುವ ಹೊತ್ತು. ಜಾನಪದ ಬದುಕನ್ನು ಬದುಕಿದರೂ ಅದನ್ನು ದಾಖಲಿಸುವ, ಸಂಶೋಧಿಸಿ ಅದಕ್ಕೆ ಶಿಷ್ಟ ರೂಪಕೊಡುವ ಪ್ರಯತ್ನ ನಡೆಯಲೇ ಇಲ್ಲ. ಆರಂಭದಲ್ಲಿ ದಲಿತ-ಬಂಡಾಯದ ಹೋರಾಟ ಮತ್ತು ಚಳವಳಿಯ ಭಾಗವಾಗಿ ಸೃಷ್ಟಿಯಾದ ಸಾಹಿತ್ಯದ ಜನಕರಾಗಿ ಕೆಲಸ ಮಾಡತೊಡಗಿದರು. ದಲಿತ ಸಾಹಿತ್ಯವನ್ನು ಗುರುತಿಸಿ ಅವುಗಳಲ್ಲಿ ಸಂಶೋಧನೆಗೆ ತೊಡಗಿಕೊಂಡಿರುವುದು ಕೂಡ ಮೇಲ್‌ಜಾತಿಯ ಬರಹಗಾರರು ಎನ್ನುವುದು ಗಮನಾರ್ಹ. ಅವರಲ್ಲಿಯ ಕೆಲ ಸುಧಾರಣಾವಾದಿಗಳ ಸಹಕಾರದಿಂದ ಡಾ. ಸಿದ್ದಲಿಂಗಯ್ಯ, ಪಿ. ಕೆ. ಖಂಡೋಬಾ, ಎಂ. ಬಿ. ನೇಗಿನಹಾಳ ಮೊದಲಾದವರು ಎಂಎ ಸಾಹಿತ್ಯ ಓದುತ್ತಾ, ಸಂಶೋಧನೆಗೆ ಜಾನಪದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಈ ಕೃತಿ ಅಂದಿನಿಂದ ಇಂದಿನವರೆಗೆ ದಲಿತ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬರಹಗಳನ್ನು ಒಟ್ಟಾಗಿಸಿದೆ.

ಮುಖ್ಯವಾಗಿ ದಲಿತರ ಜಾನಪದ ಬದುಕೆಂದರೆ ಅವರ ಆರಾಧನೆ ಮತ್ತು ಆಚರಣೆಗಳು. ದಲಿತರ ಬದುಕನ್ನು ಹೊರತು ಪಡಿಸಿ ದಲಿತ ಜಾನಪದವನ್ನು ಗುರುತಿಸಲು ಸಾಧ್ಯವಿಲ್ಲ. ಇಲ್ಲಿ, ಜಾನಪದ ಸಂಶೋಧನೆಯ ಜೊತೆ ಜೊತೆಗೆ ದಲಿತರ ಬದುಕಿನ ವಿವಿಧ ಮಗ್ಗುಲುಗಳನ್ನು ಶೋಧಿಸಲಾಗಿದೆ. ಡಾ. ಸಿದ್ದಲಿಂಗಯ್ಯ ಅವರು ‘ಕೆಲವು ಆರಾಧನೆಗಳು ಮತ್ತು ಆಚರಣೆಗಳು’, ಡಾ. ಪಿ.ಕೆ. ಖಂಡೋಬಾ ಅವರು ‘ಕನ್ನಡ ಸಾಂಸ್ಕೃತಿಕ ಅಧ್ಯಯನ’ದ ಬಗ್ಗೆ ಬರೆದಿದಾರೆ. ಉಳಿದಂತೆ, ಡಾ. ಎಂ. ಬಿ. ನೇಗಿನಹಾಳರ ‘ಮೈಲಾರಲಿಂಗ ಮತ್ತು ಪರಿವಾರ ದೇವತೆಗಳು’, ಡಾ. ಕೆ. ಆರ್. ದುರ್ಗಾದಾಸ್ ಅವರ ‘ಪ್ರಾಚೀನ ಸಾಹಿತ್ಯದಲ್ಲಿ ಜಾನಪದ ಅಂತರ್ ಸಂಬಂಧ’, ಡಾ. ಸಣ್ಣರಾಮ ಅವರ ‘ಜಾಗತೀಕರಣ ಮತ್ತು ಜಾನಪದ ಲೋಕ’, ಡಾ. ಅರವಿಂದ ಮಾಲಗತ್ತಿ ಅವರ ‘ದೇಶೀಯವಾದ ಮತ್ತು ಜನಪದ ಆಟಗಳು’, ಡಾ. ಡಿ. ಬಿ. ನಾಯಕ ಅವರ ‘ಬುಡಕಟ್ಟು ಅನನ್ಯತೆ-ಜಾಗತೀಕರಣ’, ಡಾ. ಕೆ. ಎಂ. ಮೇತ್ರಿ ಅವರ ‘ಜಾನಪದಶ್ರೀ ನಾಡೋಜ ಬುರ್ರಕಥಾ ದರೋಜಿ ಈರಮ್ಮ’, ಡಾ. ಎಚ್. ಟಿ. ಪೋತೆ ಅವರ ‘ಜಾನಪದ ಜ್ಞಾನ-ವಿಜ್ಞಾನ’, ಡಾ. ಅರ್ಜುನ ಗೋಳಸಂಗಿ ಅವರ ‘ಕುರ್ರುಮಾಮಗಳು’, ಡಾ. ಹೆಬ್ಬಾಲೆ ಕೆ. ನಾಗೇಶ್ ಅವರ ‘ಜಾತ್ರೆಗಳು ಮತ್ತು ದೇವದಾಸಿಯವರು’ ಇಲ್ಲಿರುವ ಪ್ರಮುಖ ಬರಹಗಳಾಗಿವೆ. ದಲಿತರ ಸ್ಥಿತಿಗತಿಗಳನ್ನು ಅರಿಯುವುದಕ್ಕೂ ಈ ಬರಹಗಳು ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ಹಿರಿಯ ತಲೆಮಾರಿನಿಂದ ಹಿಡಿದು, ಈಗಿನ ಹೊಸ ತಲೆಮಾರಿನ ಯುವ ವಿದ್ವಾಂಸರು ಜಾನಪದಕ್ಕೆ ಸಂಬಂಧಿಸಿದ ಜನಪದ ಸಂಸ್ಕೃತಿ, ಕ್ರೀಡೆ, ನಂಬಿಕೆ, ಕಲೆ, ಸಾಹಿತ್ಯ ವಿವಿಧ ಬುಡಕಟ್ಟು ನೆಲೆಗಳ ಅಧ್ಯಯನ, ಜಾನಪದ ಮತ್ತು ಜಾಗತೀಕರಣ, ಕೃಷಿಗೆ ಸಂಬಂಧಿಸಿದ ಮಹತ್ವದ ಲೇಖನಗಳನ್ನು ಸಂಕಲಿಸಲಾಗಿದೆ. ಡಾ. ಎಚ್. ಟಿ. ಪೋತೆ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. 352 ಪುಟಗಳ ಈ ಕೃತಿಯ ಮುಖಬೆಲೆ 360 ರೂಪಾಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News