ಶಿವಸೇನೆಯ 'ಮೈತ್ರಿ' ಕನಸಿಗೆ ತಣ್ಣೀರೆರಚಿದ ಶರದ್ ಪವಾರ್

Update: 2019-11-06 16:31 GMT
PTI

ಮುಂಬೈ, ನ. 6: ಬಿಜೆಪಿ ಹಾಗೂ ಶಿವಸೇನೆ ಜನಾದೇಶ ಪಡೆದುಕೊಂಡಿದೆ. ಆದುದರಿಂದ ಅವರು ಮಹಾರಾಷ್ಟ್ರದಲ್ಲಿ ಶೀಘ್ರ ಸರಕಾರ ರಚಿಸಬೇಕು ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.

ಶಿವಸೇನೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲಿದೆ ಹಾಗೂ ಎನ್‌ಸಿಪಿ, ಕಾಂಗ್ರೆಸ್ ಬೆಂಬಲದಿಂದ ಸರಕಾರ ರಚಿಸಲಿದೆ ಎಂಬ ವದಂತಿಯನ್ನು ಶರದ್ ಪವಾರ್ ತಳ್ಳಿ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ರಾಜಕೀಯ ಮೈತ್ರಿಯ ಬಗ್ಗೆ ಮತ್ತೆ ಕೇಳಿ ಬಂದ ವದಂತಿಯ ಕುರಿತು ಶಿವಸೇನೆ ನಾಯಕ ಸಂಜಯ್ ರಾವತ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಮಾದ್ಯಮದೊಂದಿಗೆ ಮಾತನಾಡಿದರು.

‘‘ವಿಪಕ್ಷದ ಪಾತ್ರ ನಿರ್ವಹಿಸುವುದು ನಮಗೆ ನೀಡಿದ ಜನಾದೇಶ. ಆದುದರಿಂದ ಶಿವಸೇನೆ-ಎನ್‌ಸಿಪಿ ಸರಕಾರದ ಪ್ರಶ್ನೆ ಎಲ್ಲಿ ?, ಅವರು (ಬಿಜೆಪಿ-ಶಿವಸೇನೆ) ಕಳೆದ 25 ವರ್ಷಗಳಿಂದ ಮೈತ್ರಿಯಲ್ಲಿದ್ದಾರೆ. ಇಂದು ಅಥವಾ ನಾಳೆ ಅವರು ಮತ್ತೊಮ್ಮೆ ಏಕಾಭಿಪ್ರಾಯಕ್ಕೆ ಬರಲಿದ್ದಾರೆ’’ ಎಂದು ಅವರು ಹೇಳಿದ್ದಾರೆ.

 ಶಿವಸೇನೆಗೆ 170 ಸದಸ್ಯರ ಬೆಂಬಲ ಇದೆ ಎಂಬ ಸಂಜಯ್ ರಾವತ್ ಅವರ ಪ್ರತಿಪಾದನೆ ಬಗ್ಗೆ ಪ್ರತಿಕ್ರಿಯಿಸಿದ ಪವಾರ್, ಈ ಲೆಕ್ಕಾಚಾರ ತನ್ನ ಪಕ್ಷ ಹಾಗೂ ಕಾಂಗ್ರೆಸ್ ಅನ್ನು ಒಳಗೊಂಡಿಲ್ಲ. 170 ಸದಸ್ಯರ ಬೆಂಬಲ ಹೇಗೆ ಸಿಗುತ್ತದೆ ಎಂದು ನಾನು ಸಂಜಯ್ ರಾವತ್ ಅವರಲ್ಲಿ ಕೇಳಲು ಬಯಸುತ್ತೇನೆ ಎಂದರು.

ರಾಜ್ಯದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಭಾರೀ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿದ ರೈತರಿಗೆ ಕೇಂದ್ರ ಸರಕಾರ ನೆರವು ನೀಡಬೇಕು. ನಾನು ಮಳೆಯಿಂದ ಬೆಳೆ ಹಾನಿ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಅಲ್ಲಿನ ಪರಿಸ್ಥಿತಿ ನೋಡಿ ರೈತರಿಗೆ ಪರಿಹಾರ ನೀಡಬೇಕು ಎಂಬ ಭಾವನೆ ಉಂಟಾಗಿದೆ. ಅಲ್ಲದೆ ಬೆಳೆ ಹಾನಿಗೆ ವಿಮಾ ಕಂಪೆನಿಗಳು ಪರಿಹಾರ ನೀಡುತ್ತಿಲ್ಲ. ಈ ವಿಷಯದಲ್ಲಿ ಹಣಕಾಸು ಸಚಿವಾಲಯ ಮಧ್ಯೆ ಪ್ರವೇಶಿಸಬೇಕು ಎಂದು ಶರದ್ ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News