ಟಿಪ್ಪು ಜಯಂತಿ ರದ್ದತಿ ಆದೇಶವನ್ನು ಪುನರ್ ಪರಿಶೀಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2019-11-06 14:23 GMT

ಬೆಂಗಳೂರು, ನ.6: ಟಿಪ್ಪು ಸುಲ್ತಾನ್ ಜಯಂತಿ ಸರಕಾರಿ ಆಚರಣೆಯನ್ನು ರದ್ದುಗೊಳಿಸಿದ ಆದೇಶವನ್ನು ಪುನರ್ ಪರಿಶೀಲಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ಉತ್ತರಪ್ರದೇಶದ ಲಖನೌ ನಿವಾಸಿ ಬಿಲಾಲ್ ಅಲಿ ಶಾ, ಟಿಪ್ಪು ರಾಷ್ಟ್ರೀಯ ಸೇವಾ ಸಂಘ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ನ್ಯಾಯಪೀಠವು ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿ ಹೊರಡಿಸಿರುವ ಆದೇಶವನ್ನು ಸರಕಾರ ಪುನರ್ ಪರಿಶೀಲಿಸಬಹುದು. ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಸರಕಾರದ ಕೆಲಸ ಎಂದು ಅಭಿಪ್ರಾಯಪಟ್ಟು, ಖಾಸಗಿಯಾಗಿ ಟಿಪ್ಪು ಜಯಂತಿ ಆಚರಿಸಲು ಯಾವುದೇ ನಿರ್ಬಂಧವಿಲ್ಲ. ಸರಕಾರ ನ.10ರಂದು ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಅವರು, ಜುಲೈ ತಿಂಗಳಲ್ಲಿ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಮಂತ್ರಿಮಂಡಲದಲ್ಲಿ ಬೇರೆ ಯಾವುದೇ ಸಚಿವರು ಇರಲಿಲ್ಲ. ಹೀಗಿದ್ದರೂ ಟಿಪ್ಪುಜಯಂತಿ ಆಚರಣೆಯನ್ನು ರದ್ದುಪಡಿಸಲಾಗಿದೆ. ಯಾವುದೇ ಸಚಿವರ, ರಾಜ್ಯಪಾಲರ ಹಾಗೂ ಯಾರೊಬ್ಬರ ಅಭಿಪ್ರಾಯವನ್ನೂ ಪರಿಗಣಿಸದೆ ರದ್ದು ಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 28 ಜಯಂತಿಗಳನ್ನು ಸರಕಾರವೇ ಆಚರಿಸುತ್ತದೆ. ಆದರೆ, ಟಿಪ್ಪು ಜಯಂತಿಯನ್ನು ಮಾತ್ರ ರದ್ದುಪಡಿಸಿರುವುದು ದುರಂತವಾಗಿದೆ. ಸರಕಾರದ ಈ ನಡೆಯಿಂದ ಜಾತಿ ತಾರತಮ್ಯ ನಡೆಸುತ್ತಿರುವುದು ಗೋತ್ತಾಗುತ್ತದೆ. ಇದು ಮುಸ್ಲಿಮರ ವಿರುದ್ಧದ ತಾರತಮ್ಯ ನೀತಿಯನ್ನು ತೋರಿಸುತ್ತದೆ. ಸರಕಾರ ಯಾವಾಗ ಬೇಕಾದರೂ ತನ್ನ ಕಾಯ್ದೆಗಳನ್ನು ಬದಲಿಸಿಕೊಳ್ಳಬಹುದಾದರೂ ಅದಕ್ಕೆ ಒಂದು ನೀತಿ ನಿಯಮವಿದೆ. ಆದರೆ ಏಕಾಏಕಿ ಟಿಪ್ಪು ಜಯಂತಿಯನ್ನು ರದ್ದು ಮಾಡಿರುವುದು ಸರಿಯಲ್ಲ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಲ್ಲಿ ರಾಜ್ಯದಲ್ಲಿ ಇಷ್ಟು ಜಯಂತಿಗಳನ್ನು ಆಚರಿಸಲು ಕಾರಣ ಏನು ಎಂದು ಪ್ರಶ್ನಿಸಿತು. ಎಜಿ ಅವರು ಸಹೋದರತ್ವ ಮನೋಭಾವ, ಜಾತ್ಯತೀತ ಮನೋಭಾವ, ಒಗ್ಗೂಡುವಿಕೆ, ಒಬ್ಬರನೊಬ್ಬರು ಅರಿತು ಬಾಳಲು ಆಚರಿಸಲಾಗುತ್ತದೆ ಎಂದು ಪೀಠಕ್ಕೆ ಉತ್ತರ ನೀಡಿದರು.

ನ್ಯಾಯಪೀಠವು ಟಿಪ್ಪು ಜಯಂತಿ ವಿಚಾರದಲ್ಲಿ ಎಂದು ಮರು ಪ್ರಶ್ನೆ ಹಾಕಿದಾಗ ಕೊಡಗಿನ ಒಂದು ಭಾಗದಲ್ಲಿ ತೀವ್ರ ಸಮಸ್ಯೆಯಾಯಿತು, ಗುಂಪು ಘರ್ಷಣೆ ನಡೆಯಿತು, ಓರ್ವನ ಹತ್ಯೆಯಾಯಿತು ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಟಿಪ್ಪು ಜಯಂತಿ ಹಿಂಪಡೆದ ಕಾರಣದಿಂದಾಗಿ ಅರ್ಜಿದಾರರ ಯಾವ ಹಕ್ಕು ಮೊಟುಕುಗೊಂಡಂತಾಗಿದೆ ಎಂದು ಪ್ರಶ್ನೆ ಕೇಳಿದರು.

ರಾಜ್ಯೋತ್ಸವ ವಿಚಾರದಲ್ಲೂ ಗಲಭೆಗಳಾಗಿವೆ. ಕಾನೂನು ಸುವ್ಯವಸ್ಥೆಯನ್ನು ಸರಕಾರ ಕಾಪಾಡಬೇಕು. ಕಾನೂನು ಸುವ್ಯವಸ್ಥೆ ಕಾರಣಗಳಿಂದ ರದ್ದುಪಡಿಸಲು ಸಾಧ್ಯವೇ ಎಂದು ನ್ಯಾಯಪೀಠವು ಪ್ರಶ್ನೆ ಮಾಡಿತು. ಈ ಪ್ರಕರಣ ಸಾರ್ವಜನಿಕ ಹಿತಾಸಕ್ತಿ ವಿಚಾರವಾಗಿದೆ. ಎಜಿ ಅವರು ಹೇಳಿದನ್ನು ನಾವು ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಅಲ್ಲದೆ, ಇದು ಜಾತ್ಯತೀತ ರಾಷ್ಟ್ರ, ನಾವು ಇಲ್ಲಿ ಸೋದರರಂತೆ ಬಾಳ್ವೆ ಮಾಡಬೇಕೆಂದು ಸಂವಿಧಾನದಲ್ಲಿ ತಿಳಿಸಲಾಗಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಕೊನೆಯಲ್ಲಿ ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಜ್ಯ ಸರಕಾರ ಕೂಡಲೇ ಕ್ರಮವಹಿಸಬೇಕು. ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವನ್ನು ಸರಕಾರ ಮಾಡಬೇಕು. ನಿಯಮ ಬದಲಾವಣೆಯನ್ನು ಸರಕಾರ ಕ್ರಮೇಣವಾಗಿ ಮಾಡಬೇಕು. ಸುಪ್ರೀಂಕೋರ್ಟ್ ಪ್ರಕರಣವೊಂದರ ತೀರ್ಪು ನೀಡುವಾಗ ಇದನ್ನು ಪರಿಗಣಿಸಲು ಸೂಚಿಸಿದೆ. ಹೀಗಾಗಿ ರಾಜ್ಯ ಸರಕಾರ ತನ್ನ ಆದೇಶವನ್ನು ಪುನರ್ ಪರಿಶೀಲಿಸಬಹುದು ಅಥವಾ ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಜ.3ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News