ಅರಣ್ಯಾಧಿಕಾರಿ ಪುನರಾಗಮನಕ್ಕೆ ಕಾವೇರಿ ಸೇನೆ ಆಕ್ಷೇಪ

Update: 2019-11-06 18:30 GMT

ಮಡಿಕೇರಿ, ನ.6: ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ಮರಕಡಿತಲೆಗೆ ಕಾನೂನು ಬಾಹಿರವಾಗಿ ಪರವಾನಿಗೆ ನೀಡಿ, ಅಮಾನತಿಗೆ ಒಳಗಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರು ಮತ್ತೆ ಕೊಡಗಿಗೆ ಬರಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಾವೇರಿ ಸೇನೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಕೆ.ಎ.ರವಿಚಂಗಪ್ಪ, ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮಂಜುನಾಥ್ ಅವರು, ಕೆ. ನಿಡುಗಣೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 800ಕ್ಕೂ ಅಧಿಕ ಬೃಹತ್ ಗಾತ್ರದ ಮರಗಳನ್ನು ಕಡಿಯಲು ಕಾನೂನು ಬಾಹಿರವಾಗಿ ಪರವಾನಿಗೆ ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿಂದಿನ ರಾಜ್ಯ ಸರಕಾರ ಅವರನ್ನು ಅಮಾನತ್ತಿನಲ್ಲಿಟ್ಟು, ತನಿಖೆಗೆ ಆದೇಶಿಸಿತ್ತು ಎಂದರು.

ಪ್ರಸಕ್ತ ಅಮಾನತಿನಲ್ಲಿರುವ ಮಂಜುನಾಥ್ ಅವರು ತಮ್ಮ ಅಮಾನತು ಆದೇಶವನ್ನು ರದ್ದು ಮಾಡಿಸಿಕೊಂಡು ವೀರಾಜಪೇಟೆ ಉಪವಿಭಾಗಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಿಸಿಕೊಳ್ಳಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ಈ ಅಮಾನತು ರದ್ದತಿಗೆ ಕೊಡಗಿನ ಜನಪ್ರತಿನಿಧಿಯೊಬ್ಬರು ಸಹಕಾರ ನೀಡಲು ಮುಂದಾಗಿರುವುದಾಗಿಯೂಹೇಳಲಾಗಿದ್ದು, ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಅದು ಕೊಡಗಿನ ಜನತೆಯ ದೌರ್ಭಾಗ್ಯವೇ ಸರಿ ಎಂದು ಆರೋಪಿಸಿದರು.
ಇಂತಹ ಅಧಿಕಾರಿ ಇದೀಗ ಸಂಪದ್ಭರಿತವಾದ ವೀರಾಜಪೆೇಟೆ ವಿಭಾಗದಲ್ಲಿ ಆಡಳಿತಾರೂಢರ ಸಹಕಾರದೊಂದಿಗೆ ಅಧಿಕಾರ ವಹಿಸಿಕೊಳ್ಳಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ಅಧಿಕಾರಿಯ ಅಮಾನತನ್ನು ಯಾವುದೇ ಕಾರಣಕ್ಕೂ ಹಿಂಪಡೆಯದೆ ವಿಚಾರಣೆ ಪೂರ್ಣಗೊಳಿಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮಂಜುನಾಥ್ ಅವರನ್ನು ವೀರಾಜಪೇಟೆ ಉಪವಿಭಾಗ ಇಲ್ಲವೇ ಕೊಡಗಿನ ಯಾವುದೇ ವಿಭಾಗಕ್ಕೆ ಕರ್ತವ್ಯಕ್ಕೆ ನಿಯೋಜಿಸಿದ್ದಲ್ಲಿ ಜನರ ಸಹಕಾರದೊಂದಿಗೆ ಆಯ್ದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಆ ಅಧಿಕಾರಿಯ ಎಲ್ಲಾ ವಿವರಗಳನ್ನು ಒಳಗೊಂಡ ದೂರನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸುವುದರೊಂದಿಗೆ ನ್ಯಾಯಾಲಯದ ಮೊರೆ ಹೋಗವುದಾಗಿ ರವಿಚಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾವೇರಿ ಸೇನೆ ಕಾರ್ಯದರ್ಶಿ ಕೋಲತಂಡ ರಘು ಮಾಚಯ್ಯ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೊಸಬೀಡು ಶಶಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News