ವಿದ್ಯುತ್ ಸಮಸ್ಯೆಯಿಂದ ನಗರಕ್ಕೆ ಕುಡಿಯುವ ನೀರಿಲ್ಲ: ಮೌನಕ್ಕೆ ಶರಣಾದ ಅಧಿಕಾರಿಗಳು

Update: 2019-11-06 18:41 GMT

ತುಮಕೂರು,ನ.6: ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಪಂಪ್ ಹೌಸ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಲೈನ್‌ನ ಕಂಬಗಳು ಮಣ್ಣು ಮಾಫಿಯಾದ ಕರಾಳತೆಯಿಂದ ನೀರಿನಲ್ಲಿ ಮುಳುಗಿದ್ದು ನಗರಕ್ಕೆ ಎರಡು ದಿನಗಳಿಂದ ನೀರು ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ.

ಕಳೆದ ಒಂದು ವರ್ಷದ ಹಿಂದೆಯೇ ನಗರದ ವಾರ್ಡ್ ನಂ-01ರ ಸಂಜೀವಯ್ಯನ ಕಟ್ಟೆಯಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿರುವ ಬಗ್ಗೆ ಸಿಪಿಐ 26-10-2018ರಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕಂದಾಯಾಧಿಕಾರಿಗಳು, ಪೊಲೀಸ್ ಸೇರಿದಂತೆ ಆಡಳಿತ ವ್ಯವಸ್ಥೆಗೆ ದೂರು ನೀಡಿದ್ದರು. ಆದರೆ ಅಧಿಕಾರಿಗಳು ಅಕ್ರಮವಾಗಿ ಮಣ್ಣು ತೆಗೆದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಂದ ಒಳ್ಳೆಯ ಮಳೆಗೆ ಕಟ್ಟೆಯಲ್ಲಿದ್ದ ವಿದ್ಯುತ್ ಕಂಬಗಳು ನೆಲಕ್ಕ ಉರುಳಿದ ಪರಿಣಾಮ, ಕುಡಿಯುವ ನೀರಿಗಾಗಿ ವಿಶೇಷವಾಗಿ ನಿರ್ಮಿಸಿದ್ದ ಎಕ್ಸೆಪ್ರೆಸ್ ಲೈನ್‌ನಲ್ಲಿ ವಿದ್ಯುತ್ ಹರಿಸಲಾಗದೆ, ಕಳೆದ ಎರಡು ದಿನಗಳಿಂದ ತುಮಕೂರು ನಗರಕ್ಕೆ ಬುಗುಡನಹಳ್ಳಿ ಕೆರೆಯಿಂದ ಹೇಮಾವತಿ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎಂಬುದು ತಿಳಿದು ಬಂದಿದೆ.

ಸಂಜೀವಯ್ಯನ ಕೆರೆಯಲ್ಲಿ 40ರಿಂದ 50 ಅಡಿ ಆಳ ತೆಗೆದು ಅಕ್ರಮವಾಗಿ ಮಣ್ಣನ್ನು ಪ್ರತಿಷ್ಠಿತ ವ್ಯಕ್ತಿಗಳ ಲೇಔಟ್ ಹಾಗೂ ರೈಲ್ವೆ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ.ಕೆರೆಯಲ್ಲಿ ಮಣ್ಣು ತುಂಬುತ್ತಿರುವುದರಿಂದಾಗಿ ಬುಗುಡನಹಳ್ಳಿ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಲೈನ್‌ನ ವಿದ್ಯುತ್ ಕಂಬಗಳು ನೀರಿನಲ್ಲಿ ಮುಳುಗುಡೆಯಾಗುತ್ತವೆ. ಇದರಿಂದಾಗಿ ಬೆಸ್ಕಾಂ ಇಲಾಖೆಗೆ ನಷ್ಟವಾಗಲಿದ್ದು,ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಸ್ಕಾಂ ಅಧಿಕಾರಿಗಳ ಮನವಿಗೂ ಕಂದಾಯ ಇಲಾಖೆಯ ಅಧಿಕಾರಿಗಳ ಬಳಿ ಬೆಲೆ ಇಲ್ಲದಂತಾಗಿದೆ.ಜಿಲ್ಲಾಡಳಿತದ ನಿರ್ಲಕ್ಷ್ಯತೆಯಿಂದ ಸಾರ್ವಜನಿಕರು ಪರದಾಡುವಂತಾಗಿದ್ದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಯಾವುದೇ ಅಧಿಕಾರಿಗಳು ಮುಂದಾಗದೇ ಇರುವುದು ದುರದೃಷ್ಟಕರ.

ಈಗಲಾದರೂ ಜಿಲ್ಲಾಡಳಿ ತ ಎಚ್ಚೆತ್ತುಕೊಂಡು ಅಕ್ರಮವಾಗಿ ಮಣ್ಣನ್ನು ಸಾಗಣೆ ಮಾಡುವ ಮೂಲಕ ವಿದ್ಯುತ್ ಕಂಬಗಳ ಮುಳುಗಡೆಗೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬೆಸ್ಕಾಂ ಇಲಾಖೆಗೆ ಆಗಿರುವ ನಷ್ಟವನ್ನು ಮರುಪಾವತಿಸಬೇಕು ಹಾಗೂ ಸಂಜೀವಯ್ಯನ ಕೆರೆ ಭರ್ತಿಯಾದರೆ ಕೆರೆ ಒಡೆಯುವ ಅಪಾಯದಲ್ಲಿದ್ದು, ಕೆರೆಯನ್ನು ಸಂರಕ್ಷಿಸುವ ಜೊತೆ ತಂತಿಬೇಲಿಯನ್ನು ನಿರ್ಮಿಸಿ,ಕೆರೆ ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News