ಭಾರತಕ್ಕೆ ಗಡೀಪಾರುಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದ ನೀರವ್ ಮೋದಿ

Update: 2019-11-07 17:15 GMT

 ಲಂಡನ್, ನ. 7: ತನ್ನನ್ನು ಭಾರತಕ್ಕೆ ಗಡಿಪಾರು ಮಾಡಲು ಆದೇಶ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬುದಾಗಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ಅಗಾಧ ಮೊತ್ತದ ಹಣವನ್ನು ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.

 ಬುಧವಾರ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆತನ ಜಾಮೀನು ಅರ್ಜಿಯ ವಿಚಾರಣೆ ನಡೆದ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿದೆ.

ಆತನ ಮಾನಸಿಕ ಸ್ಥಿತಿಯ ಕುರಿತ ಗೌಪ್ಯ ವೈದ್ಯಕೀಯ ವರದಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ ಎನ್ನಲಾಗಿದೆ.

ನೀರವ್ ಮೋದಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ನಂಬಲು ಯಾವುದೇ ಕಾರಣವಿಲ್ಲ ಹಾಗೂ ಜಾಮೀನಿನಲ್ಲಿ ಬಿಡುಗಡೆಯಾದರೆ ವಿದೇಶಕ್ಕೆ ಪರಾರಿಯಾಗುವುದಿಲ್ಲ ಎನ್ನುವುದನ್ನೂ ನಂಬಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶೆ ಎಮ್ಮಾ ಆ್ಯರ್ಬತ್‌ನಾಟ್ ಹೇಳಿದರು ಹಾಗೂ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಆದರೆ, ಆತನ ಗೌಪ್ಯ ವೈದ್ಯಕೀಯ ವರದಿಯು ಭಾರತೀಯ ಮಾಧ್ಯಮಗಳಿಗೆ ಸೋರಿಕೆಯಾಗಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಹೀಗಾದರೆ ಭಾರತ ಸರಕಾರದ ಮೇಲಿನ ನಂಬಿಕೆಗೆ ಪೆಟ್ಟು ಬೀಳುತ್ತದೆ ಎಂದು ಅವರು ಹೇಳಿದರು.

ನೀರವ್ ಮೋದಿಯ ಜಾಮೀನು ಅರ್ಜಿಯನ್ನು ವಿರೋಧಿಸಿದ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ (ಸಿಪಿಎಸ್)ನ ಜೇಮ್ಸ್ ಲೂಯಿಸ್, ‘‘ತನ್ನನ್ನು ಗಡಿಪಾರು ಮಾಡಲು ಆದೇಶ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೀರವ್ ಮೋದಿ ಹೇಳಿದ್ದಾರೆ. ಇದು ಅವರ ತಲೆಮರೆಸಿಕೊಳ್ಳುವ ಪ್ರಬಲ ಇಚ್ಛೆಯನ್ನಷ್ಟೇ ತೋರಿಸುತ್ತದೆ’’ ಎಂದು ಹೇಳಿದರು.

ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ ಭಾರತ ಸರಕಾರದ ಪರವಾಗಿ ವಾದಿಸುತ್ತಿದೆ.

ನೀರವ್ ಮೋದಿ ಮಾರ್ಚ್ 19ರಿಂದ ಜೈಲಿನಲ್ಲಿದ್ದಾರೆ.

ಮೇ 11ರಿಂದ 15ವರೆಗೆ ವಿಚಾರಣೆ

ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 14,000 ಕೋಟಿ ರೂಪಾಯಿ ವಂಚಿಸಿರುವ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಕೋರಿ ಭಾರತ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೆಸ್ಟ್‌ಮಿನ್ಸ್‌ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 2020ರ ಮೇ 11ರಿಂದ 15ರವರೆಗೆ ನಡೆಯಲಿದೆ.

ಅಲ್ಲಿಯವರೆಗೆ ಆತನನ್ನು ಪ್ರತಿ 28 ದಿನಗಳಿಗೊಮ್ಮೆ ವೀಡಿಯೊ ಲಿಂಕ್ ಮೂಲಕ ನ್ಯಾಯಾಲಯದ ಎದುರು ಹಾಜರುಪಡಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News