ಭಾರತದ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್‌ಪುರ ಕಾರಿಡಾರ್ ಬಳಸಲು ಪಾಸ್‌ಪೋರ್ಟ್ ಅಗತ್ಯ: ಮೇಜರ್ ಜನರಲ್ ಆಸಿಫ್ ಗಫೂರ್

Update: 2019-11-07 09:44 GMT

ಇಸ್ಲಾಮಾಬಾದ್, ನ. 7: ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್‌ಪುರ ಕಾರಿಡಾರ್ ಬಳಸಲು ಪಾಸ್‌ಪೋರ್ಟ್ ಅಗತ್ಯವಿರುತ್ತದೆ ಎಂದು ಪಾಕಿಸ್ತಾನದ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದಾರೆ.

 ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಉದ್ಘಾಟಿಸಲಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನವೆಂಬರ್ 1 ರಂದು ಭಾರತದಿಂದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ ತೀರ್ಥಯಾತ್ರೆಗಾಗಿ ಪ್ರಯಾಣಿಸುವ ಸಿಖ್ ಯಾತ್ರಿಕರಿಗೆ ಎರಡು ಪ್ರಮುಖ ಅವಶ್ಯಕತೆಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದರು.

ಭಾರತೀಯ ಸಿಖ್ ಯಾತ್ರಾರ್ಥಿಗಳು ಇನ್ನು ಮುಂದೆ ತಮ್ಮ ಪಾಸ್‌ಪೋರ್ಟ್ ತರುವ  ಅಗತ್ಯವಿಲ್ಲ ಮತ್ತು ಕರ್ತಾರ್‌ಪುರ ತೀರ್ಥಯಾತ್ರೆಗೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಮಾನ್ಯತೆ ಪಡೆದ ಐಡಿ ಮಾತ್ರ ಬೇಕಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದರು.

ಎರಡನೆಯದಾಗಿ, ಭೇಟಿ ನೀಡುವ ಸಿಖ್ಖರು ಇನ್ನು ಮುಂದೆ ಹತ್ತು ದಿನಗಳ ಮುಂಚಿತವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ನಲ್ಲಿ ತಿಳಿಸಿದ್ದರು.

ನವೆಂಬರ್ 9 ರಂದು ಕರ್ತಾರ್‌ಪುರ ಕಾರಿಡಾರ್ ತೆರೆಯುವಾಗ ಮತ್ತು ನವೆಂಬರ್ 12 ರಂದು ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯಂದು ಯಾತ್ರಾರ್ಥಿಗಳಿಂದ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದರು.

ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ದೇಗುಲವಾದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಭೇಟಿ ನೀಡಲು ಅವಕಾಶ ನೀಡುವ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕಳೆದ ವಾರ ಸಹಿ ಹಾಕಿತ್ತು.

ಈ ಒಪ್ಪಂದವು ಪ್ರತಿದಿನ 5,000 ಭಾರತೀಯ ಯಾತ್ರಾರ್ಥಿಗಳಿಗೆ ಗುರುನಾನಕ್ ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಕಳೆದ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಅವಕಾಶ ನೀಡುತ್ತದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿರುವ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಕರ್ತಾರ್‌ಪುರದ ದರ್ಬಾರ್ ಸಾಹಿಬ್‌ನೊಂದಿಗೆ ಭಾರತದ ಪಂಜಾಬ್‌ನ ಡೇರಾ ಬಾಬಾ ನಾನಕ್ ದೇವಾಲಯವನ್ನು ಈ ಕಾರಿಡಾರ್ ಸಂಪರ್ಕಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News