ಯಡಿಯೂರಪ್ಪ ಆಡಿಯೋ ಬಗ್ಗೆ ರಾಷ್ಟ್ರಪತಿಗೆ ದೂರು: ಸಿದ್ದರಾಮಯ್ಯ

Update: 2019-11-07 12:56 GMT

ಬೆಂಗಳೂರು, ನ.7: ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವ ಆಡಿಯೋ ಕ್ಲಿಪ್ ಕುರಿತು ರಾಷ್ಟ್ರಪತಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮಾತನಾಡಿರುವ ಆಡಿಯೋ ಕ್ಲಿಪ್‌ನಲ್ಲಿ ಆಪರೇಷನ್ ಕಮಲದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳುವಲ್ಲಿ ಇವರಿಬ್ಬರ ನೇರ ಪಾತ್ರವಿದೆ. ಶಾಸಕರು ರಾಜೀನಾಮೆ ಪಕ್ಷಾಂತರ ಮಾಡಲು ಇವರೇ ಕಾರಣಕರ್ತರಾಗಿದ್ದಾರೆ. ಶಾಸಕರ ಕುದುರೆ ವ್ಯಾಪಾರ ನಡೆದಿದೆ. ಕೇಂದ್ರದ ಗೃಹ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು, ರಾಷ್ಟ್ರಪತಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್‌ನ ಉದ್ದೇಶ ಚುನಾಯಿತ ಪ್ರತಿನಿಧಿಗಳು ಆಯಾ ರಾಂ, ಗಯಾರಾಂ ಆಗಬಾರದು ಎಂದು. ಆದರೆ, ಈ ಪ್ರಕರಣದಲ್ಲಿ 10ನೇ ಶೆಡ್ಯೂಲ್‌ನ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಷ್ಟ್ರಪತಿಯನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಶಾಲೆಯ ಇತಿಹಾಸ ಪುಸ್ತಕಗಳಿಂದ ಟಿಪ್ಪು ಸುಲ್ತಾನ್ ವಿಚಾರಗಳನ್ನು ಕೈ ಬಿಟ್ಟರೆ, ಮೈಸೂರು ರಾಜ್ಯದ ಇತಿಹಾಸ ಅಪೂರ್ಣವಾಗುತ್ತದೆ. ಇವತ್ತು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಸಭೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಿಮ್ಮ ಕ್ಷೇತ್ರಕ್ಕೆ 1 ಸಾವಿರ ಕೋಟಿ ರೂ. ಕೊಡುತ್ತೇನೆ’ ಎಂದು ಯಡಿಯೂರಪ್ಪ ಹೇಳಿದ್ದರೆಂದು ಸ್ವತಃ ಅನರ್ಹ ಶಾಸಕ ನಾರಾಯಣ ಗೌಡ ಅವರೆ ಒಪ್ಪಿಕೊಂಡಿದ್ದಾರೆ. ಶಾಸಕರ ರಾಜೀನಾಮೆಗೂ ನಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಬಿಜೆಪಿ ನಾಯಕರು ಇದಕ್ಕೇನನ್ನುತ್ತಾರೆ?
-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News