ಚಿಕ್ಕಮಗಳೂರು: ಇಬ್ಬರು ಸರಗಳ್ಳರ ಬಂಧನ

Update: 2019-11-07 12:19 GMT

ಚಿಕ್ಕಮಗಳೂರು, ನ.7: ನಗರದ ವಿವಿಧ ಬಡಾವಣೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಸರಗಳ್ಳರ ತಂಡವೊಂದರ ಇಬ್ಬರು ಆರೋಪಿಗಳನ್ನು ನಗರಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನಗರ ವ್ಯಾಪ್ತಿಯಲ್ಲಿ ನಡೆದ 11 ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.

ನಗರದ ಶರೀಫ್ ಗಲ್ಲಿ ನಿವಾಸಿ ಮುಹಮ್ಮದ್ ಅಲಿ ಅಲಿಯಾಸ್ ಶೋಹೆಬ್ ಅಲಿ(27) ಹಾಗೂ ಬೇಲೂರು ತಾಲೂಕಿನ ಹಗರೆ ಗ್ರಾಮದ ನಿವಾಸಿ ಪವನ್ (19) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಿಸಿದ ಎರಡು ಪಲ್ಸರ್ ಬೈಕ್ ಹಾಗೂ 2.15 ಲಕ್ಷ ರೂ. ಮೌಲ್ಯದ 72 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ನಗರಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ 11 ಸರಗಳ್ಳತನ ಪ್ರಕರಣಗಳು ನಡೆದಿದ್ದು, ಈ ಪೈಕಿ ನಗರಠಾಣೆಯಲ್ಲಿ 5, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಹಾಗೂ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣಗಳು ವರದಿಯಾಗಿತ್ತು.

ಈ ಪ್ರಕರಣಗಳ ಆರೋಪಿಗಳ ಪೈಕಿ ಮೂರು ಪ್ರಕರಣಗಳ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳಿಗಳನ್ನು ಬಂಧಿಸಲು ಕಳೆದೊಂದು ವರ್ಷದಿಂದ ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ಸರಗಳ್ಳರ ತಂಡದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ಗುಂಪಿನ 7 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸರಗಳ್ಳರ ತಂಡ ನಗರದ ವಿವಿಧ ಜನವಿರಳ ಬಡಾವಣೆಗಳಲ್ಲಿ ದ್ವಿಚಕ್ರವಾಹನಗಳಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ತಾಳಿಗಳನ್ನು ಕಿತ್ತು ಪರಾರಿಯಾಗುತ್ತಿದ್ದರು. ಉಳಿದ 7 ಆರೋಪಿಗಳನ್ನು ಶೀಘ್ರ ಬಂಧಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಎಸ್ಪಿ ಹರೀಶ್ ಪಾಂಡೆ, ಎಎಸ್ಪಿ ಶೃತಿ, ಡಿಎಸ್ಪಿ ಬಿ.ಎಸ್.ಅಂಗಡಿ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತದ ಸಿಪಿಐ ಸಲೀಂ ಅಬ್ಬಾಸ್, ನಗರಠಾಣೆಯ ಪಿಎಸ್ಸೈ ಬಸವರಾಜ್, ಬಸವನಹಳ್ಳಿ ಠಾಣೆಯ ಪಿಎಸ್ಸೈ ಚಂದ್ರಶೇಖರ್, ನಗರಠಾಣಾ ಸಿಬ್ಬಂದಿಯಾದ ಗಿರೀಶ್, ಲೋಹಿತ್, ನವೀನ್, ಶಶಿಧರ್, ಮಧುಕುಮಾರ್, ಪ್ರವೀಣ್, ಇಮ್ರಾನ್, ಬಸವನಹಳ್ಳಿ ಠಾಣೆಯ ಸಿಬ್ಬಂದಿ ರವಿ, ಗಂಗೇಶ್, ಯುವರಾಜ್ ಚಾಲಕರಾದ ಇಬ್ರಾಹೀಂ, ಪ್ರಸನ್ನ ಅವರು ಸರಗಳ್ಳರ ತಂಡದ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News