ಶಿವಮೊಗ್ಗದಲ್ಲಿ ಮುಂದುವರಿದ ಭಾರೀ ಮಳೆ: ತಗ್ಗು ಪ್ರದೇಶಗಳು ಜಲಾವೃತ

Update: 2019-11-07 13:59 GMT

ಶಿವಮೊಗ್ಗ, ನ. 7: ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಗುರುವಾರ ಸಂಜೆ ನಗರದಲ್ಲಿ ಬಿರುಗಾಳಿ, ಗುಡುಗು ಸಹಿತ ಬಿದ್ದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. 

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಳೆಯಾಯಿತು. ಇದರಿಂದ ರಾಜಕಾಲುವೆ, ಚರಂಡಿಗಳು ಅಕ್ಷರಶಃ ಉಕ್ಕಿ ಹರಿದವು. ನಗರದ ಬಹುತೇಕ ತಗ್ಗು ಪ್ರದೇಶಗಳು ಜಲಮಯವಾಗಿದ್ದವು. 

ತಡರಾತ್ರಿ ನೆರೆಗೆ ತುತ್ತಾಗಿದ್ದ ಟ್ಯಾಂಕ್‍ಮೊಹಲ್ಲಾ, ಬಾಪೂಜಿನಗರ ಬಡಾವಣೆಯು ಮತ್ತೆ ಮುಳುಗಡೆಯಾಗಿದ್ದವು. ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಉಳಿದಂತೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಿರುವ ರಸ್ತೆಯ ಮೇಲೆ ಮೂರು ಅಡಿ ನೀರು ಹರಿಯುತ್ತಿತ್ತು. 

ಖಾಸಗಿ ಬಸ್ ನಿಲ್ದಾಣ ಆವರಣ ಕೆರೆಯಾಗಿ ಪರಿವರ್ತಿತವಾಗಿತ್ತು. ಉಳಿದಂತೆ ಬಹುತೇಕ ನಗರದ ಮುಖ್ಯ ರಸ್ತೆಗಳ ಮೇಲೆಯೇ ಮಳೆ ನೀರು ಹರಿದು, ಕೆಲ ಸಮಯ ಜನ-ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. 

ಶಾಲಾ-ಕಾಲೇಜು, ಕಚೇರಿ ಬಿಡುವ ಸಮಯದಲ್ಲಿ ಮಳೆ ಪ್ರಾರಂಭವಾಗಿದ್ದರಿಂದ ಮನೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಮಳೆಯಲ್ಲಿ ಸಿಲುಕಿ ತೀವ್ರ ತೊಂದರೆ ಎದುರಿಸುವಂತಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News