ಮಹಾರಾಷ್ಟ್ರದಲ್ಲೂ ರೆಸಾರ್ಟ್ ರಾಜಕೀಯ: ಶಾಸಕರನ್ನು ಹೊಟೇಲ್‌ಗೆ ವರ್ಗಾಯಿಸಿದ ಶಿವಸೇನೆ

Update: 2019-11-07 14:30 GMT

 ಮುಂಬೈ, ನ. 7: ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಅಂತಿಮ ಗಡು ಸಮೀಪಿಸುತ್ತಿದೆ. ಈ ನಡುವೆ ಗುರುವಾರ ಮಹಾರಾಷ್ಟ್ರದ ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ಹಾಗೂ ತನ್ನ ಶಾಸಕರನ್ನು ಮಂಬೈ ಪಂಚತಾರಾ ಹೊಟೇಲ್‌ಗೆ ವರ್ಗಾಯಿಸಿದ ಶಿವಸೇನೆ ಸರಕಾರ ರಚನೆ ವಿಳಂಬ ಕುರಿತಂತೆ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.

ತನಗೆ 182 ಶಾಸಕರ ಬೆಂಬಲ ಇದೆ ಎಂಬ ಬಿಜೆಪಿ ಪ್ರತಿಪಾದನೆ ಕುರಿತ ವರದಿಯಿಂದ ತತ್ತರಿಸಿರುವ ಶಿವಸೇನೆ ಇಂದು ಶಾಸಕರನ್ನು ಪ್ರತ್ಯೇಕವಾಗಿರಿಸಲು ತುರ್ತು ಕ್ರಮಗಳನ್ನು ತೆಗೆದುಕೊಂಡಿದೆ. ಶಾಸಕರಿಗೆ ನಗದು ಬ್ಯಾಗ್‌ಗಳ ಆಮಿಷ ಒಡ್ಡಲಾಗಿದೆ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ಆರೋಪಿಸಿದೆ.

ತನ್ನ ನಿವಾಸ ‘ಮಾತೋಶ್ರೀ’ಯಲ್ಲಿ ಸಭೆ ನಡೆಸಿದ ಬಳಿಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶಿವಸೇನೆಯ ಶಾಸಕರು ಹಾಗೂ ಬೆಂಬಲ ನೀಡುತ್ತಿರುವ ಕೆಲವು ಸ್ವತಂತ್ರ ಶಾಸಕರನ್ನು ಬಾಂದ್ರಾದಲ್ಲಿರುವ ಹೊಟೇಲ್ ರಂಗಶಾರದಕ್ಕೆ ಕರೆದೊಯ್ದಿದ್ದಾರೆ.

‘ಮಾತೋಶ್ರೀ’ಯಿಂದ 2 ಕಿ.ಮೀ. ದೂರದಲ್ಲಿರುವ ಹಾಗೂ ಶಿವಸೇನೆಯ ಕೇಂದ್ರ ಕಚೇರಿಗೆ ತುಂಬಾ ಹತ್ತಿರದಲ್ಲಿರುವ ಹೊಟೇಲ್‌ನಲ್ಲಿ ಶಾಸಕರನ್ನು ಎರಡು ದಿನಗಳ ಕಾಲ ಇರಿಸಲು ನಿರ್ಧರಿಸಲಾಗಿದೆ.

ಶಿವಸೇನೆ ತನ್ನ ಶಾಸಕರ ಮೇಲೆ ನಿಗಾ ಇರಿಸಿದ ನಡುವೆ ಬಿಜೆಪಿ ನಾಯಕರು ಗುಂಪೊಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿದೆ.

‘‘ಮೈತ್ರಿ (ಬಿಜೆಪಿ-ಶಿವಸೇನೆ) ಸ್ಪಷ್ಟ ಬಹುಮತ ಪಡೆದಿದೆ. ಇದರ ಆಧಾರದಲ್ಲಿ ಸರಕಾರ ರಚನೆಯಾಗಲಿದೆ. ನಾವು ಈ ಬಗ್ಗೆ ರಾಜ್ಯಪಾಲರಲ್ಲಿ ಚರ್ಚೆ ನಡೆಸಿದ್ದೇವೆ’’ ಎಂದು ಮಹಾರಾಷ್ಟ್ರ ಬಿಜೆಪಿ ವರಿಷ್ಠ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಶಾಸಕರನ್ನು ಪಂಚತಾರಾ ಹೊಟೇಲ್‌ಗೆ ವರ್ಗಾಯಿಸಿದ ವರದಿ ನಿರಾಕರಿಸಿದ ಶಿವಸೇನೆ

ಒಂದು ಬಣ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇರುವುದರಿಂದ ಶಿವಸೇನೆ ಮುಂಬೈಯ ಪಂಚತಾರ ಹೊಟೇಲ್‌ನಲ್ಲಿ ಕೊಠಡಿ ಕಾಯ್ದಿರಿಸಿದೆ ಎಂಬ ವರದಿ ನಿರಾಕರಿಸಿರುವ ಶಿವಸೇನೆಯ ಸಂಸದ ಸಂಜಯ್ ರಾವತ್, ‘‘ನಮ್ಮ ಶಾಸಕರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಇಬ್ಭಾಗವಾಗದು’’ ಎಂದಿದ್ದಾರೆ.

‘‘ಶಿವಸೇನೆ ಶಾಸಕರ ಹತ್ತಿರ ಬರಲು ಯಾರೊಬ್ಬರಿಗೂ ಧೈರ್ಯ ಇಲ್ಲ. ನಮ್ಮ ಶಾಸಕರು ನಿರ್ಧಾರಕ್ಕೆ ಹಾಗೂ ಪಕ್ಷಕ್ಕೆ ಬದ್ಧರಾಗಿದ್ದಾರೆ. ಇಂತಹ ವದಂತಿಗಳನ್ನು ಹರಡುವವರು ತಮ್ಮ ಶಾಸಕರ ಬಗ್ಗೆ ಚಿಂತಿಸಲಿ’’ ಎಂದು ಅವರು ಹೇಳಿದರು.

 ಶಿವಸೇನೆ ವರದಿಯನ್ನು ನಿರಾಕರಿಸಿದ ಹೊರತಾಗಿಯೂ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ಯಿಂದ ಕೇವಲ 5 ನಿಮಿಷಗಳ ದೂರದಲ್ಲಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಪಂಚತಾರಾ ಹೊಟೇಲ್‌ಗೆ ಶಾಸಕರನ್ನು ವರ್ಗಾಯಿಸ ಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News