ಜಾತಿ ಹೆಸರಿನಲ್ಲಿ ಎಂದೂ ರಾಜಕೀಯ ಮಾಡಿಲ್ಲ: ಡಿ.ಕೆ.ಶಿವಕುಮಾರ್

Update: 2019-11-07 14:56 GMT

ಮೈಸೂರು,ನ.7: ನಾನು ಜಾತಿ ಹೆಸರಿನಲ್ಲಿ ಎಂದೂ ರಾಜಕೀಯ ಮಾಡಿದವನಲ್ಲ, ಜಾತಿ ವ್ಯಾಮೋಹಕ್ಕೆ ಒಳಗಾಗಿ ಯಾರಿಗಾದರೂ ಸಹಾಯ ಮಾಡಿದ್ದೇನೆ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾನು ಎಂದೂ ಜಾತಿ ಹೆಸರೇಳಿಕೊಂಡು ರಾಜಕೀಯ ಮಾಡಿದವನಲ್ಲ, ಅದರ ಅವಶ್ಯಕತೆಯೂ ನನಗಿಲ್ಲ, ನಾನು ಜಾತ್ಯಾತೀತವಾಗಿ, ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಿದವನು ಎಂದು ಹೇಳಿದರು.

ನಾನು ಜೈಲಿಗೆ ಹೋದಾಗ ಹೆಣ್ಣು ಮಕ್ಕಳು, ಮಹಿಳೆಯರು ಸೇರಿದಂತೆ ನನ್ನ ಅಭಿಮಾನಿಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಹೋರಾಟ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ತಪ್ಪು ಮಾಡಿಲ್ಲ ಎಂದು ಪ್ರಾರ್ಥನೆ ಮಾಡಿದ್ದಾರೆ. ಅದರ ಫಲವಾಗಿ 50 ದಿನಗಳಲ್ಲಿ ನಾನು ವಾಪಸ್ ಬಂದಿದ್ದೇನೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ನನ್ನ ಮೇಲಿನ ಅಭಿಮಾನದ ಸಾಲ ಜಾಸ್ತಿಯಾಗಿದೆ. ಅದನ್ನು ಹೇಗೆ ತೀರಿಸಬೇಕು ಎಂದು ತಿಳಿಯುತ್ತಿಲ್ಲ ಎಂದು ಕಾರ್ಯಕರ್ತರು ಅಭಿಮಾನಿಗಳತ್ತ ಕೈ ಮುಗಿದರು.

ನನ್ನ ಪಾಲಿಗೆ ಬಂದಿದ್ದ ಮೆಡಿಕಲ್ ಕಾಲೇಜನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕಾಲ ಚಕ್ರ ಹೀಗೆ ಇರುವುದಿಲ್ಲ, ಕಾಲ ಉರುಳತ್ತಲೇ ಇರುತ್ತದೆ. ಸಮಯ ಬಂದಾಗ ಕಾಲ ಚಕ್ರ ಏನು ಎಂದು ತೋರಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

ನಾನು ಜೈಲಿಗೆ ಹೋದಾಗ ಯಾರ್ಯಾರು ಏನೇನು ಮಾತನಾಡಿದರು ಹೇಗೆ ಟೀಕೆ ಮಾಡಿದರು ಎಂದು ಗೊತ್ತಿದೆ. ಸೂರ್ಯ ಎಷ್ಟೇ ಎತ್ತರಕ್ಕೆ ಹೋದರೂ  ಕೆಳಗೆ ಇಳಿಯಲೇ ಬೇಕು, ಬೆಳಕು ಸರಿದು ಕತ್ತಲು ಬರಲೇಬೇಕು. ಬಿಜೆಪಿಯವರು ಸೇರಿ ನನ್ನ ಎಲ್ಲಾ ಸ್ನೇಹಿತರಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಿದರು.

ನನ್ನ ಕುರಿತು ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಏನೇನು ಮಾತನಾಡಿದರು ಎಂದು ಗೊತ್ತಿದೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಅವರು ಹಿರಿಯರು ಎಲ್ಲವನ್ನು ತಿಳಿದು ಕೊಂಡಿರುವ ದೊಡ್ಡ ವ್ಯಕ್ತಿ ಎಂದ ಅವರು, ಕೆಲವರು ದೊಡ್ಡವರನ್ನು ಮೆಚ್ಚಿಸಲು ನನ್ನ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ ಎಂದರು.

ನಾನು ಮೈಸೂರಿಗೆ ಬರುವ ಕಾರ್ಯಕ್ರಮದಲ್ಲಿ ಪಟ್ಟಿಯಲ್ಲಿ ಕಾಂಗ್ರೆಸ್ ಕಚೇರಿಗೆ ಬರುವುದು ಇರಲಿಲ್ಲ. ಆದರೆ ನಿಮ್ಮ ಅಭಿಮಾನ ಪ್ರೀತಿಗೆ ಬಂದಿದ್ದೇನೆ. ಕಾಂಗ್ರೆಸ್ ಕಚೇರಿ ದೇವಾಲಯ ಇದ್ದಂತೆ. ನಾನು ಮೈಸೂರಿಗೆ ಆಗಮಿಸಿದ ವಿಷಯ ತಿಳಿದು ಜೆಡಿಎಸ್ ಪಕ್ಷದ ಆರು ಜನ ಶಾಸಕು ದೂರವಾಣಿ ಮೂಲಕ ಮಾತನಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‍ನ ಕಾರ್ಯಕರ್ತರು ಸಹ ಸ್ವಾಗತಿಸಲು ಬಂದಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಎಂದು ಹೇಳಿದರು.
ನಾನು ತಪ್ಪು ಮಾಡಿಲ್ಲ, ನನಗೆ ತೊಂದರೆ ನೀಡಿದಾಗ ಆತ್ಮ ಸ್ಥೈರ್ಯ ಕಳೆದುಕೊಳ್ಳಲಿಲ್ಲ, ನಾನು ಜೈಲಿಗೆ ಹೋದಾಗ ನನ್ನ ಪತ್ನಿ ಮತ್ತು ಮಗಳು ಆತಂಕಕ್ಕೀಡಾಗಿದ್ದರು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಮಕ್ಕಳು ಕಾಲೇಜಿಗೆ ಹೋದಾಗ ನಿಮ್ಮ ಅಪ್ಪ ಜೈಲಿಗೆ ಹೋದವರು ಅನ್ನೋದನ್ನು ಹೇಗೆ ಎದುರಿಸುತ್ತಾರೆ ಅನ್ನೋ ಭಯ ಅಷ್ಟೆ. ನನ್ನ ರಾಜಕಾರಣದಲ್ಲಿ ಎಂದು ಹೆದರಿದವನಲ್ಲ ಎಂದು ಹೇಳಿದರು.

ಕಾರ್ಯಕ್ರಮ ಮುಗಿದ ನಂತರ ನೇರವಾಗಿ ನಂಜನಗೂಡಿಗೆ ತೆರಳಿ ಶ್ರೀಶ್ರೀಕಂಠೇಶ್ವರಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕರುಗಳಾದ ತನ್ವೀರ್ ಸೇಠ್, ಆರ್.ನರೇಂದ್ರ, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್,  ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು,  ಯುವ ಕಾಂಗ್ರೆಸ್ ಮುಖಂಡ ನಾಗೇಶ್ ಕರಿಯಪ್ಪ,  ಕೆಪಿಸಿಸಿ ಸದಸ್ಯರುಗಳಾದ ಅಕ್ಬರ್ ಅಲೀಂ, ನಾರಾಯಣಸ್ವಾಮಿ, ಹೆಡತಲೆ ಮಂಜುನಾಥ್, ಎನ್.ಭಾಸ್ಕರ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಕಾಂಗ್ರೆಸ್ ಮುಖಂಡರುಗಳಾದ ಲೋಕೇಶ್ ಪಿಯಾ, ಭಾಸ್ಕರ್, ಮೈಸೂರು ಬಸವಣ್ಣ, ಸುನೀಲ್, ಉದ್ಯಮಿ ಯಶವಂತ್,  ಶೌಖತ್ ಅಲಿಖಾನ್, ಸಿದ್ದರಾಜು, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೈಸೂರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ತೆರೆದ ವಾಹನದಲ್ಲಿ ರೈಲು ನಿಲ್ದಾಣದಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿಗಳು ಕ್ರೇನ್ ಮೂಲಕ 500 ಕೆ.ಜಿ. ತೂಕದ ಸೇಬಿನ ಹಾರವನ್ನು ಹಾಕಿ ಜೈಕಾರ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News