ಸಂವಿಧಾನ ದಿನಾಚರಣೆಗೆ ಸ್ಪೀಕರ್ ಕಾಗೇರಿ ಒತ್ತಾಯ

Update: 2019-11-07 17:48 GMT

ಬೆಂಗಳೂರು, ನ. 7: ಸಂವಿಧಾನ ಅಂಗೀಕರಿಸಲ್ಪಟ್ಟ ದಿನವಾದ ನ.26ರಂದು ಸಂವಿಧಾನದ ಬಗ್ಗೆ ಅರಿವು ಮೂಡಿಸಲು ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳು, ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ದಿನ ಆಚರಣೆ ಮಾಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೋರಿದ್ದಾರೆ.

ಗುರುವಾರ ವಿಧಾನಸೌಧದ ಮೊದಲ ಮಹಡಿಯಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಗತ್ತಿನಲ್ಲೆ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ, ಎಲ್ಲರಿಗೂ ಪ್ರೇರಣೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಹಿಂದಿನ ಶಕ್ತಿ ಎಂದು ಸ್ಮರಿಸಿದರು.

ಸಂವಿಧಾನದ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಸಂವಿಧಾನದ ಪ್ರತಿಗಳನ್ನು ಜನರಿಗೆ ವಿತರಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸಬೇಕು. ಸಂವಿಧಾನದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕಾಗೇರಿ ಆಗ್ರಹಿಸಿದರು.

‘ಪ್ರಧಾನಿ ಮೋದಿ ಭಾರತದ ಸಂವಿಧಾನ ಅಂಗೀಕರಿಸಲ್ಪಟ್ಟ 1949ರ ನವೆಂಬರ್ 26ರ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಘೋಷಣೆ ಮಾಡಿದ್ದು ಪ್ರತಿ ವರ್ಷವೂ ಸದರಿ ದಿನವನ್ನು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಅರ್ಥಪೂರ್ಣವಾಗಿ ಆಚರಿಸಬೇಕು’
-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News