ಆಮದು ತೆರಿಗೆಯನ್ನು ಹಂತಗಳಲ್ಲಿ ತೆಗೆದುಹಾಕಲು ಅಮೆರಿಕ, ಚೀನಾ ಒಪ್ಪಿಗೆ?

Update: 2019-11-07 17:51 GMT

ಬೀಜಿಂಗ್, ನ. 7: ಚೀನಾ ಮತ್ತು ಅಮೆರಿಕಗಳು ಪರಸ್ಪರರ ವಸ್ತುಗಳ ಆಮದಿನ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆಯನ್ನು ಹಂತಗಳಲ್ಲಿ ತೆಗೆದುಹಾಕುವ ಯೋಜನೆಯೊಂದನ್ನು ಒಪ್ಪಿಕೊಂಡಿವೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ಗುರವಾರ ಹೇಳಿದೆ

ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದವನ್ನು ಏರ್ಪಡಿಸಲು ಆ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸುತ್ತಿರುವ ನಡುವೆ ಈ ಬೆಳವಣಿಗೆ ಸಂಭವಿಸಿದೆ.

ಚೀನಾ ಮತ್ತು ಅಮೆರಿಕಗಳು ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ವ್ಯಾಪಾರ ಸಮರದಲ್ಲಿ ತೊಡಗಿವೆ.

 ಆದರೆ, ವಿಸ್ತೃತ ಒಪ್ಪಂದವೊಂದರ ಭಾಗವಾಗಿ ಕಿರು ಒಪ್ಪಂದವೊಂದರ ಸಮೀಪ ಈ ದೇಶಗಳು ತಲುಪಿವೆ ಎಂದು ವರದಿಗಳು ಹೇಳಿವೆ.

‘‘ಕಳೆದ ಎರಡು ವಾರಗಳಲ್ಲಿ ಉಭಯ ದೇಶಗಳ ಸಂಧಾನಕಾರರು ಪರಸ್ಪರರ ಕಳವಳಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಮತ್ತು ರಚನಾತ್ಮಕ ಮಾತುಕತೆಗಳನ್ನು ನಡೆಸಿದ್ದಾರೆ ಹಾಗೂ ಹೆಚ್ಚುವರಿ ತೆರಿಗೆಗಳನ್ನು ಹಂತಗಳಲ್ಲಿ ತೆಗೆದುಹಾಕಲು ಒಪ್ಪಿದ್ದಾರೆ. ಈಗ ಅಂತಿಮ ಒಪ್ಪಂದಕ್ಕೆ ಸಿದ್ಧತೆಗಳು ನಡೆಯುತ್ತಿವೆ’’ ಎಂದು ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೊ ಫೆಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News