ಅಧ್ಯಕ್ಷರ ರಾಜೀನಾಮೆಗೆ ಜೆಡಿಎಸ್ ಸದಸ್ಯರ ಬಿಗಿಪಟ್ಟು: ಮತ್ತೆ ಮುಂದೂಡಲ್ಪಟ್ಟ ಮಂಡ್ಯ ಜಿಪಂ ಸಾಮಾನ್ಯಸಭೆ

Update: 2019-11-07 18:35 GMT

ಮಂಡ್ಯ, ನ.7: ಅಧ್ಯಕ್ಷೆ ನಾಗರತ್ನಸ್ವಾಮಿ ಅವರ ರಾಜೀನಾಮೆಗೆ ಸ್ವಪಕ್ಷೀಯರ ಒತ್ತಾಯದ ಹಿನ್ನೆಲೆಯಲ್ಲಿ ಕಳೆದ ಬಾರಿ ಮುಂದೂಡಲಾಗಿದ್ದ ಜಿಪಂ ಸಾಮಾನ್ಯಸಭೆ, ಗುರುವಾರವೂ ಕೋರಂ ಅಭಾವದಿಂದ ಮುಂದೂಡಲ್ಪಟ್ಟಿತು.

ಮುಂದುವರಿದ ಸಾಮಾನ್ಯಸಭೆಗೆ ಅಧ್ಯಕ್ಷೆ ನಾಗರತ್ನಸ್ವಾಮಿ ನಿಗದಿತ ಸಮಯಕ್ಕೆ ಹಾಜರಾದರು. ಕಾಂಗ್ರೆಸ್ ಸದಸ್ಯರೂ ಹಾಜರಾದರು. ಆದರೆ, ಆಡಳಿತರೂಢ ಜೆಡಿಎಸ್‍ನ ಕೆಲವು ಸದಸ್ಯರು ಕಪ್ಪುಪಟ್ಟಿ ಧರಿಸಿಕೊಂಡು ಸಭಾಂಗಣದಿಂದ ಹೊರಗುಳಿದರು.

ಸಭೆ ಆರಂಭಕ್ಕೆ ಕೋರಂ ಅಭಾವ ತಲೆದೋರಿತು. ನಿಮ್ಮ ಪಕ್ಷದವರನ್ನು ಮನವೊಲಿಸಿ ಕರೆದುತನ್ನಿ, ನಿಮ್ಮ ಪಕ್ಷದ ಸಮಸ್ಯೆ ಇಲ್ಲಿಗೆ ತರಬೇಡಿ. ಅಭಿವೃದ್ಧಿ ವಿಚಾರ ಚರ್ಚೆಯಾಗಬೇಕಿದೆ ಎಂದು ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಿಗೆ ತಾಕೀತು ಮಾಡಿದರು.

ತಾನು ಈಗಾಗಲೇ ಮನವಿ ಮಾಡಿದ್ದೇನೆ. ಆದರೆ, ಅವರು ಸಭೆಗೆ ಬರುತ್ತಿಲ್ಲ.  ಸ್ವಲ್ಪ ಕಾಯೋಣ ಎಂದು ನಾಗರತ್ನಸ್ವಾಮಿ ಹೇಳಿದರು. ಆ ವೇಳೆಗೆ ಕಪ್ಪುಪಟ್ಟಿ ಧರಿಸಿ ಒಳಬಂದ ಜೆಡಿಎಸ್‍ನ ಸಿ.ಅಶೋಕ್ ಹಾಗೂ ಎಚ್.ಎನ್.ಯೋಗೇಶ್ ಅವರು ಕೋರಂ ಅಭಾವವಿದ್ದರೆ ಮುಂದೂಡಿ ಎಂದು ಮನವಿ ಮಾಡಿದರು.

ಸ್ಥಾಯಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅಧ್ಯಕ್ಷರು ಏಕಾಏಕಿ ಬದಲಾವಣೆ ಮಾಡಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಬೆಲೆ ಇಲ್ಲವೇ? ಅಧ್ಯಕ್ಷರ ಮೇಲೆ ಸದಸ್ಯರಿಗೆ ವಿಶ್ವಾಸವಿಲ್ಲದ ಕಾರಣ ಸಭೆಯನ್ನು ನಡೆಸಬಾರದು ಎಂದು ಎಚ್.ಎನ್.ಯೋಗೇಶ್ ಹೇಳಿದರು.
ನಂತರ ಅಧ್ಯಕ್ಷೆ ನಾಗರತ್ನ ಸ್ವಾಮಿ ಸಭೆಯನ್ನು ಮುಂದೂಡಿದರು. ಜೆಡಿಎಸ್ ಸದಸ್ಯರ ವರ್ತನೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಜಿಪಂ ಕಚೇರಿ ಎದುರು ಪ್ರತಿಭಟಿಸಿದರು. ಇದರಲ್ಲಿ ಅಧ್ಯಕ್ಷೆ ನಾಗರತ್ನಸ್ವಾಮಿ ಕೂಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News