ಗುರಿ ತಪ್ಪಿದ ಬೇಟೆ: ಗುಂಡೇಟಿನಿಂದ ವ್ಯಕ್ತಿಗೆ ಗಾಯ

Update: 2019-11-08 11:40 GMT

ಮಡಿಕೇರಿ,ನ.7: ಕಾಡು ಹಂದಿ ಎಂದು ಭಾವಿಸಿ ಬಂದೂಕಿನಿಂದ ಹಾರಿಸಿದ ಗುಂಡು ಮತ್ತೋರ್ವ ಬೇಟೆಗಾರನಿಗೆ ತಗುಲಿ ಗಾಯಗೊಂಡ ಘಟನೆ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಯ್ಯಂಗೇರಿ ನಿವಾಸಿ ಸುರೇಶ್ ಎಂಬವರೇ ಗಾಯಗೊಂಡ ವ್ಯಕ್ತಿಯಾಗಿದ್ದು, ಪ್ರಕರಣಕ್ಕೆ ಸಂಬಂದಿಸಿದಂತೆ ಅಯ್ಯಂಗೇರಿ ನಿವಾಸಿಗಳಾದ ಸಂತೋಷ್, ಚಂದ್ರ ಶೇಕರ್, ನಿಖಿಲ್ ಎಂಬವರನ್ನು ಭಾಗಮಂಡಲ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ವ್ಯಕ್ತಿಗಳ ವಿರುದ್ದ ಶಸ್ತ್ರಾಸ್ತ್ರ ದುರ್ಬಳಕೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಂದ ಬೇಟೆಗೆ ಬಳಸಿದ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನ.6 ರ ರಾತ್ರಿ ಅಯ್ಯಂಗೇರಿ ನಿವಾಸಿಗಳಾದ ಸಂತೋಷ್, ಚಂದ್ರ ಶೇಕರ್, ನಿಖಿಲ್ ಮತ್ತು ಸುರೇಶ್ ಎಂಬವರು ಜೊತೆಯಲ್ಲೇ ಬೇಟೆಗೆ ತೆರಳಿದ್ದರು ಎನ್ನಲಾಗಿದೆ. ಬೇಟೆಗೆ ತೆರಳಿದವರು ನಿಗಧಿತ ಸ್ಥಳಕ್ಕೆ ತಲುಪಿದ ಬಳಿಕ ಬೆಟ್ಟ ಪ್ರದೇಶದಲ್ಲಿ ಪ್ರತ್ಯೇಕಗೊಂಡಿದ್ದಾರೆ. ಕಾಡು ಹಂದಿ ಬರುವ ಸ್ಥಳದಲ್ಲಿ ಸಂತೋಷ್ ಕಾದು ಕುಳಿತಿದ್ದರು ಎನ್ನಲಾಗಿದೆ. ಈ ಸಂದರ್ಭ ಎದುರು ಬದಿಯಿಂದ ಪೊದೆಯಲ್ಲಿ ಶಬ್ದ ಕೇಳಿ ಬಂದಿದೆ. ಈ ಶಬ್ದ ಕಾಡು ಹಂದಿಯದ್ದೇ ಎಂದು ಭಾವಿಸಿದ ಸಂತೋಷ್ ಅತ್ತ ಕಡೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಸುರೇಶ್ ಅವರ ಕಾಲಿಗೆ ಗುಂಡು ಬಡಿದಿದೆ. 

ತಕ್ಷಣವೇ ಸುರೇಶ್ ಅವರನ್ನು ವಿರಾಜಪೇಟೆಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂದರ್ಭ ಬೇಟೆಯ ಪ್ರಕರಣದಲ್ಲಾದ ಗುಂಡೇಟು ಎಂದು ತಿಳಿದು ಬಂದ ಹಿನ್ನಲೆಯಲ್ಲಿ ಭಾಗಮಂಡಲ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News