ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಮಾಡಿದ ವೆಚ್ಚ ಎಷ್ಟು ಗೊತ್ತೇ ?

Update: 2019-11-08 03:35 GMT

ಹೊಸದಿಲ್ಲಿ: ಸಂಪನ್ಮೂಲ ಭರಿತ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆ ಸಂಪನ್ಮೂಲದ ಕೊರತೆ ಇದೆ ಎಂಬ ಪ್ರತಿಪಾದನೆಯ ನಡುವೆಯೇ ಕಳೆದ ಲೋಕಸಭಾ ಚುನಾವಣೆ ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ 820 ಕೋಟಿ ರೂ. ವೆಚ್ಚ ಮಾಡಿದೆ ಎಂಬ ಅಂಶ ಬಹಿರಂಗವಾಗಿದೆ.

2014ರ ಸಾರ್ವತ್ರಿಕ ಚುನಾವಣೆಗೆ ಪಕ್ಷ ಮಾಡಿದ ವೆಚ್ಚವಾದ 516 ಕೋಟಿಗಿಂತ ಇದು ಅಧಿಕ. 2014ರ ಚುನಾವಣೆಯಲ್ಲಿ ಬಿಜೆಪಿ 714 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ 2019ರ ಚುನಾವಣೆಗೆ ಮಾಡಿದ ವೆಚ್ಚದ ವಿವರಗಳನ್ನು ಬಿಜೆಪಿ ಇನ್ನೂ ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ.

ಅಕ್ಟೋಬರ್ 31ರಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ವೆಚ್ಚದ ವಿವರಗಳ ಅನ್ವಯ, ಪಕ್ಷ 623.3 ಕೋಟಿ ರೂ. ಪಕ್ಷದ ಸಾಮಾನ್ಯ ಪ್ರಚಾರ ಹಾಗೂ 193.9 ಕೋಟಿ ರೂ. ಅಭ್ಯರ್ಥಿಗಳ ಪ್ರಚಾರಕ್ಕಾಗಿ ವೆಚ್ಚ ಮಾಡಿದೆ. ಚುನಾವಣೆ ವೇಳೆ ಪಕ್ಷ ಒಟ್ಟು 856 ಕೋಟಿ ರೂ. ಸ್ವೀಕೃತಿ ಪಡೆದಿದೆ.

ಇತರ ರಾಷ್ಟ್ರೀಯ ಪಕ್ಷಗಳು ಸಲ್ಲಿಸಿದ ವೆಚ್ಚ ವಿವರದ ಪ್ರಕಾರ ತೃಣಮೂಲ ಕಾಂಗ್ರೆಸ್ ಪಕ್ಷ 83.6 ಕೋಟಿ ರೂ., ಬಿಎಸ್ಪಿ 55.4 ಕೋಟಿ, ಎನ್‌ಸಿಪಿ 72.3 ಕೋಟಿ ಹಾಗೂ ಸಿಪಿಎಂ 73.1 ಲಕ್ಷ ರೂ. ವೆಚ್ಚ ಮಾಡಿವೆ.

ಕಾಂಗ್ರೆಸ್ ಪಕ್ಷದ ಸಮಾಜ ಮಾಧ್ಯಮ ಮುಖ್ಯಸ್ಥೆ ದಿವ್ಯ ಸ್ಪಂದನ ಮೇ ತಿಂಗಳಲ್ಲಿ "ನಮ್ಮಲ್ಲಿ ಹಣ ಇಲ್ಲ" ಎಂದು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿದ್ದವು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಮಾಡಿದ 626.36 ಕೋಟಿ ರೂ. ಪೈಕಿ 573 ಕೋಟಿ ರೂ. ಚೆಕ್ ಮೂಲಕ ಪಾವತಿಸಿದ್ದು, 14.33 ಕೋಟಿ ರೂ. ನಗದು ರೂಪದಲ್ಲಿ ನೀಡಲಾಗಿದೆ. ಪಕ್ಷದ ಕೇಂದ್ರೀಯ ಸಮಿತಿ ಮಾಧ್ಯಮ ಪ್ರಚಾರ ಹಾಗೂ ಜಾಹೀರಾತಿಗೆ 356 ಕೋಟಿ ರೂ. ವೆಚ್ಚ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News