ಒಸಿಐ ಸ್ಥಾನಮಾನ ಕಳೆದುಕೊಂಡ ಆತಿಶ್ ತಸೀರ್: ಕಾರಣ ಏನು ಗೊತ್ತೇ ?

Update: 2019-11-08 04:00 GMT
ಫೋಟೊ : theprint

ಹೊಸದಿಲ್ಲಿ: ಖ್ಯಾತ ಲೇಖಕ ಆತಿಶ್ ತಸೀರ್ ಅವರ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಸ್ಥಾನಮಾನವನ್ನು ಭಾರತ ರದ್ದುಪಡಿಸಿದೆ. ಅವರ ಮೃತ ತಂದೆ ಪಾಕಿಸ್ತಾನಿ ಮೂಲದವರು ಎಂಬ ಮಾಹಿತಿಯನ್ನು ಮುಚ್ಚಿಟ್ಟ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ತಸೀರ್ ಟೈಮ್ ನಿಯತಕಾಲಿಕದಲ್ಲಿ ಲೇಖನ (ಡಿವೈಡರ್ ಇನ್ ಚೀಫ್) ಬರೆದದ್ದೇ ಗೃಹ ಸಚಿವಾಲಯದ ಮುನಿಸಿಗೆ ಕಾರಣ ಎಂದು ಹೇಳಲಾಗಿದೆ. ಮೋದಿ ಅಧಿಕಾರಕ್ಕೆ ಮರಳಿದ ಒಂದು ತಿಂಗಳ ಬಳಿಕ ಇದೇ ನಿಯತಕಾಲಿಕ ಪ್ರಧಾನಿಯನ್ನು "ಯುನಿಫೈಯರ್" ಎಂದು ಬಣ್ಣಿಸಿ ಲೇಖನ ಪ್ರಕಟಿಸಿತ್ತು.

ತಸೀರ್ ಅವರ ತಂದೆ ಸಲ್ಮಾನ್ ತಸೀರ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗವರ್ನರ್ ಆಗಿದ್ದರು ಹಾಗೂ ದೇಶದ ಅಗ್ರ ಶ್ರೇಣಿಯ ರಾಜಕಾರಣಿಯಾಗಿದ್ದರು. 2011ರಲ್ಲಿ ಧರ್ಮ ನಿಂದನೆ ಮಾಡಿದ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು ಸಮರ್ಥಿಸಿಕೊಂಡ ಕಾರಣಕ್ಕಾಗಿ ಅವರ ಅಂಗರಕ್ಷಕನೇ ಅವರನ್ನು ಗುಂಡಿಟ್ಟು ಕೊಂದಿದ್ದ. ತಸೀರ್ ಅವರ ತಾಯಿ ಭಾರತೀಯ ಅಂಕಣಕಾರ್ತಿ ತಲ್ವೀನ್ ಸಿಂಗ್.

2007ರಲ್ಲಿ ಪ್ರಕಟವಾದ "ಸ್ಟ್ರೇಂಜರ್ ಟೂ ಹಿಸ್ಟರಿ" ಎಂಬ ಕೃತಿಯಲ್ಲಿ ತಸೀರ್, ತಮ್ಮ ತಂದೆಯ ಬಗ್ಗೆ ಮತ್ತು ತಾಯಿ ಹೇಗೆ ಒಬ್ಬಂಟಿ ತಾಯಿಯಾಗಿ ತನ್ನನ್ನು ಬೆಳೆಸಿದರು ಎನ್ನುವುದನ್ನು ವಿವರಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಪಷ್ಟನೆ ಸಲ್ಲಿಸುವಂತೆ ಕೋರಿದ್ದಕ್ಕೆ ಅವರು ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಗೃಹ ಸಚಿವಾಲಯದ ಹೇಳಿಕೆಯನ್ನು ತಸೀರ್ ಅಲ್ಲಗಳೆದಿದ್ದರು.

ಆದರೆ ಇದೀಗ ತಸೀರ್ ಅವರ ಸ್ಥಾನಮಾನ ರದ್ದುಪಡಿಸಿರುವುದಕ್ಕೂ, ಟೈಮ್ ಲೇಖನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ. ಅವರ ಒಸಿಐ ಕಾರ್ಡ್ ಬಗೆಗಿನ ಆಕ್ಷೇಪಕ್ಕೆ ಉತ್ತರಿಸಲು ಅವರು ವಿಫಲರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News