ಬೊಲಿವಿಯಾ ಮೇಯರ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ...

Update: 2019-11-08 17:20 GMT
ಫೋಟೊ : bbc.com

ಲಾ ಪಾಝ್ (ಬೊಲಿವಿಯ), ನ. 8: ಬೊಲಿವಿಯ ದೇಶದ ಸಣ್ಣ ಪಟ್ಟಣವೊಂದರಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷ ಕಾರ್ಯಕರ್ತರು, ಮೇಯರ್ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ವರದಿಯಾಗಿದೆ. ಮಹಿಳಾ ಮೇಯರ್‌ರನ್ನು ಕಚೇರಿಯಿಂದ ಹೊರಗೆಳೆದ ಉದ್ರಿಕ್ತ ಪ್ರತಿಭಟನಕಾರರು, ಅವರನ್ನು ಬರಿಗಾಲಿನಲ್ಲೇ ರಸ್ತೆಯಲ್ಲಿ ದರದರನೇ ಎಳೆದುಕೊಂಡು ಹೋದರು, ಅವರ ಮೇಲೆ ಕೆಂಪು ಪೇಂಟನ್ನು ಸುರಿದ ಜನರು, ಬಳಿಕ ಅವರ ತಲೆಗೂದಲನ್ನೇ ಕತ್ತರಿಸಿ ಹಾಕಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಅಕ್ಟೋಬರ್ 20ರಂದು ನಡೆದ ವಿವಾದಾಸ್ಪದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಬೊಲಿವಿಯ ದೇಶದಲ್ಲಿ ಸರಕಾರದ ಬೆಂಬಲಿಗರು ಮತ್ತು ಪ್ರತಿಪಕ್ಷ ಕಾರ್ಯಕರ್ತರ ನಡುವೆ ಹಲವು ದಿನಗಳಿಂದ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿದ್ದು, ಇದು ಅದರ ಮುಂದುವರಿದ ಭಾಗವಾಗಿದೆ.

ದೇಶದಲ್ಲಿ ಈವರೆಗೆ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.

ಮಧ್ಯ ಬೊಲಿವಿಯದ ಕೊಚಬಾಂಬ ಪ್ರಾಂತದಲ್ಲಿನ ಸಣ್ಣ ಪಟ್ಟಣ ವಿಂಟೊದಲ್ಲಿರುವ ಸೇತುವೆಯಲ್ಲಿ ಸರಕಾರ ವಿರೋಧಿ ಪ್ರತಿಭಟನಕಾರರ ಗುಂಪೊಂದು ರಸ್ತೆ ತಡೆ ಏರ್ಪಡಿಸಿತ್ತು. ಅಲ್ಲಿಗೆ ಸಮೀಪದ ಸ್ಥಳದಲ್ಲಿ ಅಧ್ಯಕ್ಷ ಎವೊ ಮೊರಾಲ್ಸ್‌ರ ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಪ್ರತಿಪಕ್ಷ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂಬ ಗಾಳಿ ಸುದ್ದಿ ಆಗ ಹರಡಿತು.

ಉದ್ರಿಕ್ತ ಪ್ರತಿಪಕ್ಷ ಕಾರ್ಯಕರ್ತರು ತಕ್ಷಣ ಮೇಯರ್ ಕಚೇರಿಗೆ ಧಾವಿಸಿದರು. ರಸ್ತೆ ತಡೆಯನ್ನು ನಿವಾರಿಸಲು ಅಧ್ಯಕ್ಷರ ಬೆಂಬಲಿಗರನ್ನು ಬಸ್‌ಗಳಲ್ಲಿ ಮೇಯರ್ ಆರ್ಸ್ ಕಳುಹಿಸಿಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು. ಅಲ್ಲಿ ಸಂಭವಿಸಿದ ಸಾವುಗಳಿಗೆ ಮೇಯರ್ ಕಾರಣ ಎಂದು ಆರೋಪಿಸಿದರು. ಘರ್ಷಣೆಯಲ್ಲಿ ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.

‘ಕೊಲೆಗಾರ್ತಿ’, ‘ಕೊಲೆಗಾರ್ತಿ’ ಎಂಬ ಘೊಷಣೆಗಳನ್ನು ಕೂಗಿದ ಪ್ರತಿಪಕ್ಷ ಕಾರ್ಯಕರ್ತರು ಮೇಯರ್‌ರನ್ನು ಸೇತುವೆವರೆಗೆ ಬರಿಗಾಲಿನಲ್ಲೇ ಎಳೆದುಕೊಂಡು ಹೋದರು. ಅಲ್ಲಿ ಮೇಯರ್‌ರನ್ನು ಮಂಡಿಯೂರಿ ಕೂರಿಸಿದ ಅವರು, ಅವರ ಕೂದಲನ್ನು ಕತ್ತರಿಸಿದರು ಹಾಗೂ ಅವರ ಮೇಲೆ ಪೇಂಟ್ ಸುರಿದರು.

ಬಳಿಕ ಪ್ರತಿಭಟನಕಾರರು ಮೇಯರ್‌ರನ್ನು ಪೊಲೀಸರಿಗೆ ಹಸ್ತಾಂತರಿಸಿದರು.

ಚುನಾವಣೆ ರಾತ್ರಿಯಿಂದಲೂ ಹಿಂಸಾಚಾರ

ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯ ದೇಶದಲ್ಲಿ ಚುನಾವಣೆ ನಡೆದ ಅಕ್ಟೋಬರ್ 20ರ ರಾತ್ರಿಯಿಂದಲೂ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ.

ಚುನಾವಣೆ ನಡೆದ ರಾತ್ರಿ ಮತ ಎಣಿಕೆಯನ್ನು ಯಾವುದೇ ವಿವರಣೆಯಿಲ್ಲದೆ 24 ಗಂಟೆಗಳ ಕಾಲ ನಿಲ್ಲಿಸಲಾಗಿತ್ತು.

ಅಧ್ಯಕ್ಷ ಎವೊ ಮೊರಾಲ್ಸ್ ಪರವಾಗಿ ಫಲಿತಾಂಶವನ್ನು ತಿದ್ದಲು ಮತ ಎಣಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ಪ್ರತಿಪಕ್ಷ ಅಭ್ಯರ್ಥಿ ಕಾರ್ಲೋಸ್ ಮೆಸರ ಬೆಂಬಲಿಗರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೊರಾಲ್ಸ್ 2006ರಿಂದ ಅಧಿಕಾರದಲ್ಲಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತದಲ್ಲಿ ವಿಜಯಿಯಾಗಲು ಬೇಕಾದ 10 ಶೇಕಡ ಮತಗಳ ಅಂತರದಿಂದ ಮೊರಾಲ್ಸ್ ಗೆದ್ದಿದ್ದಾರೆ ಎಂದು ಅಂತಿಮ ಫಲಿತಾಂಶ ಹೇಳಿದೆ.

ಅಮೆರಿಕನ್ ದೇಶಗಳ ಸಂಘಟನೆ (ಒಎಎಸ್)ಯ ಚುನಾವಣಾ ವೀಕ್ಷಕರು ಫಲಿತಾಂಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಸಂಘಟನೆಯು ಈಗ ಮತದಾನದ ಲೆಕ್ಕ ಪರಿಶೋಧನೆ ಮಾಡುತ್ತಿದೆ.

ಆದರೆ, ಲೆಕ್ಕ ಪರಿಶೋಧನೆಯನ್ನು ತನ್ನ ಅಥವಾ ತನ್ನ ಪಕ್ಷದ ಅನುಮೋದನೆ ಇಲ್ಲದೆ ಮಾಡಲಾಗುತ್ತಿದೆ ಎಂದು ಹೇಳಿರುವ ಪ್ರತಿಪಕ್ಷ ಅಭ್ಯರ್ಥಿ ಮೆಸ, ಪರಿಶೋಧನೆಯನ್ನು ತಿರಸ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News