ಭಾರತದ ಆರ್ಥಿಕತೆಯನ್ನು 'ಸ್ಥಿರ'ದಿಂದ 'ಋಣಾತ್ಮಕ'ಕ್ಕೆ ಇಳಿಸಿದ 'ಮೂಡೀಸ್'

Update: 2019-11-08 17:37 GMT
Photo: Reuters

ಹೊಸದಿಲ್ಲಿ, ನ.8: ಭಾರತದ ಆರ್ಥಿಕ ಅಭಿವೃದ್ಧಿ ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತಲೂ ಕಡಿಮೆ ದರದಲ್ಲಿದೆ ಎಂದು ತಿಳಿಸಿರುವ ಮೂಡೀಸ್ ಇನ್‌ವೆಸ್ಟರ್ಸ್ ಸರ್ವಿಸ್ ಸಂಸ್ಥೆ, ಭಾರತದ ಆರ್ಥಿಕತೆ ಸ್ಥಿರದಿಂದ ಋಣಾತ್ಮಕತೆಗೆ ಜಾರಿದೆ ಎಂದು ತಿಳಿಸಿದೆ.

ಆರ್ಥಿಕ ಅಭಿವೃದ್ಧಿಯಲ್ಲಿ ತೀವ್ರ ಕುಸಿತ ಮತ್ತು ಅನಿರೀಕ್ಷಿತ ಕಾರ್ಪೊರೇಟ್ ತೆರಿಗೆ ಕಡಿತದಿಂದ ಈ ವರ್ಷ ಸರಕಾರದ ಆರ್ಥಿಕ ಪರಿಸ್ಥಿತಿಯ ಮೇಲೆ ಅಧಿಕ ಒತ್ತಡವಿರಲಿದೆ. ಆದರೂ ಭಾರತದ ಫಾರಿನ್ ಕರೆನ್ಸಿ ರೇಟಿಂಗ್ ‘ಬಿಎಎ2’ (ಎರಡನೇ ಕನಿಷ್ಟ ಹೂಡಿಕೆ ಶ್ರೇಯಾಂಕ ಅಂಕ)ವಿಭಾಗದಲ್ಲೇ ಮುಂದುವರಿಯಲಿದೆ . ಒಂದು ವೇಳೆ ಭಾರತದ ಆರ್ಥಿಕ ಮಾಪನ ಇನ್ನಷ್ಟು ಹದಗೆಟ್ಟರೆ ಈ ರೇಟಿಂಗ್ ಕುಸಿಯಲಿದೆ ಎಂದು ತಿಳಿಸಿದೆ.

ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟು ಮತ್ತು ದೀರ್ಘಕಾಲದ ಆರ್ಥಿಕ ಮತ್ತು ಸಾಂಸ್ಥಿಕ ನ್ಯೂನತೆಗಳನ್ನು ಪರಿಹರಿಸಲು ವಿಫಲವಾಗಿರುವುದು ಆರ್ಥಿಕ ಅಭಿವೃದ್ಧಿಗೆ ತೊಡಕಾಗಿದೆ. ಭಾರತದ ಪ್ರಗತಿಯ ದೃಷ್ಟಿಕೋನ ಈ ವರ್ಷ ಅತ್ಯಂತ ತೀವ್ರವಾಗಿ ಇಳಿಮುಖವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆರಂಭವಾದ ಬಿಕ್ಕಟ್ಟು ಬಳಿಕ ರಿಟೇಲ್ ವ್ಯವಹಾರ, ಆಟೊಮೊಬೈಲ್ ಕ್ಷೇತ್ರ, ಮನೆ ಮಾರಾಟ ಹಾಗೂ ಭಾರೀ ಉದ್ದಿಮೆ ಕ್ಷೇತ್ರಕ್ಕೂ ವ್ಯಾಪಿಸಿದೆ. ಅಭಿವೃದ್ಧಿ ದರ ಕಳೆದ ಆರು ವರ್ಷಗಳಲ್ಲೇ ಕನಿಷ್ಟ ಪ್ರಮಾಣದವಾದ 5%ಕ್ಕೆ ಇಳಿದಿದೆ. ಶೇ.8 ಅಥವಾ ಹೆಚ್ಚಿನ ಸುಸ್ಥಿರ ಪ್ರಗತಿ ದರ ಸಾಧಿಸುವ ಅವಕಾಶ ಅತ್ಯಂತ ಕಡಿಮೆ ಎಂದು ಮೂಡಿ ಸಂಸ್ಥೆಯ ಉಪಾಧ್ಯಕ್ಷ ವಿಲಿಯಂ ಫಾಸ್ಟರ್ ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರಿಗೆ ಸಾಲ ನೀಡುವ ಪ್ರಮುಖ ಮೂಲವಾಗಿರುವ ಬ್ಯಾಂಕಿಂಗೇತರ ವಿತ್ತ ಸಂಸ್ಥೆಗಳು ಕೂಡಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ದೇಶದ ಜಿಡಿಪಿಯನ್ನು ಹೂಡಿಕೆದಾರರು ನಿಕಟವಾಗಿ ಗಮನಿಸಲಿದ್ದಾರೆ ಎಂದು ವರದಿ ತಿಳಿಸಿದೆ. ಮೂಡಿ ವರದಿ ಪ್ರಕಟವಾದ ಬೆನ್ನಲ್ಲೇ ಮುಂಬೈಯ ಬೆಂಚ್‌ ಮಾರ್ಕ್ ಎಸ್‌ಆ್ಯಂಡ್‌ಪಿ ಬಿಎಸ್‌ಇ ಸೆನ್ಸೆಕ್ಟ್ ಸ್ಟಾಕ್ ಸೂಚ್ಯಂಕ 0.2% ಕುಸಿತ ಕಂಡರೆ, ರೂಪಾಯಿಯ ಮೌಲ್ಯ 0.4%ದಷ್ಟು ಕುಸಿತವಾಗಿದೆ.

ಮೂಡಿ ಸಂಸ್ಥೆಯ ವರದಿಯನ್ನು ಗಮನಿಸಿದ್ದೇವೆ. ಆದರೆ ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯಲ್ಲಿ ಭಾರತದ ಅರ್ಥವ್ಯವಸ್ಥೆಯೂ ಸೇರಿದೆ ಎಂದು ಕೇಂದ್ರ ಸರಕಾರ ಪ್ರತಿಕ್ರಿಯಿಸಿದೆ.

ತುಲನಾತ್ಮಕವಾಗಿ ನೋಡಿದರೆ ಭಾರತದ ಸ್ಥಾನಮಾನ ಸ್ಥಿರವಾಗಿದೆ. ಅರ್ಥವ್ಯವಸ್ಥೆಯನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು ಬಂಡವಾಳ ಹರಿವನ್ನು ಆಕರ್ಷಿಸುವುದರ ಜೊತೆಗೆ ಹೂಡಿಕೆಗೆ ಉತ್ತೇಜನ ನೀಡಲಿದೆ ಎಂದು ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅರ್ಥವ್ಯವಸ್ಥೆ ಇಳಿಮುಖವಾಗಿರುವ ಬಗ್ಗೆ ಆತಂಕವಿದೆ. ಸರಕಾರ ಆರ್ಥಿಕ ಶಿಸ್ತು ಪಾಲಿಸಿ ಗ್ರಾಹಕರಲ್ಲಿ ಖರೀದಿ ಸಾಮರ್ಥ್ಯ ವೃದ್ಧಿಸುವ ಉಪಕ್ರಮಗಳನ್ನು ಅನುಸರಿಸಬೇಕು ಎಂದು ನ್ಯೂಯಾರ್ಕ್‌ನ ಅಲಯನ್ಸ್‌ಬೆರ್ನ್‌ಸ್ಟೈನ್ ಸಂಸ್ಥೆಯ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

ಸುಸ್ಥಿರ ಆಧಾರದ ಅಭಿವೃದ್ಧಿ ಅಗತ್ಯ

ಸುಸ್ಥಿರ ಆಧಾರದ ಅಭಿವೃದ್ಧಿ ಸಾಧ್ಯವಾದರೆ ಅಭಿವೃದ್ಧಿಯ ಗತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸರಕಾರದ ತೆರಿಗೆ ಆದಾಯ ಹೆಚ್ಚುತ್ತದೆ ಮತ್ತು ಇದರಿಂದ ವಿತ್ತೀಯ ಕೊರತೆ ಕಡಿಮೆಯಾಗುತ್ತದೆ ಎಂದು ಮೂಡಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News