ಮಹಾರಾಷ್ಟ್ರ: ಹಗ್ಗ ಕಡಿಯುವ ಹಂತಕ್ಕೆ ತಲುಪಿದ ಹಗ್ಗಜಗ್ಗಾಟ

Update: 2019-11-09 06:34 GMT

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆಯ ಹಗ್ಗಜಗ್ಗಾಟ, ಹಗ್ಗ ಕಡಿಯುವ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ. ಗಡ್ಕರಿ ಮಧ್ಯಸ್ಥಿಕೆಯೂ ಮುರಿದು ಬಿದ್ದಿದೆ. ಚುನಾವಣೆಗೆ ಮುನ್ನವೇ 50:50ರಂತೆ ಅಧಿಕಾರ ಹಂಚಿಕೊಳ್ಳುವ ಬಗ್ಗೆ ನಿರ್ಧಾರವಾಗಿತ್ತು ಎಂದು ಶಿವಸೇನೆ ಹೇಳುತ್ತಿದ್ದರೆ, ಅಂತಹ ಒಪ್ಪಂದ ಆಗಿಯೇ ಇಲ್ಲ ಎಂದು ಗಡ್ಕರಿ ಸ್ಪಷ್ಟ ಪಡಿಸಿದ್ದಾರೆ. ಅತ್ಯಧಿಕ ಸ್ಥಾನವನ್ನು ತಾನು ಹೊಂದಿರುವುದರಿಂದ ಮುಖ್ಯಮಂತ್ರಿ ಹುದ್ದೆ ತನಗೇ ಸಿಗಬೇಕು, ಅದನ್ನು ಶಿವಸೇನೆಯೊಂದಿಗೆ ಹಂಚುವುದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ಹಟ ಹಿಡಿದು ಕೂತಿದೆ. ‘ಯಾಕೆ ಸಾಧ್ಯವಿಲ್ಲ?’ಎಂದು ಶಿವಸೇನೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಉದಾಹರಣೆಯಾಗಿ ನೀಡುತ್ತಿದೆ. ಜೊತೆಗೆ, ಅತ್ಯಧಿಕ ಸ್ಥಾನಗಳನ್ನು ಪಡೆಯದೇ ಇದ್ದರೂ, ಹಲವು ರಾಜ್ಯಗಳಲ್ಲಿ ಬಿಜೆಪಿ ಸರಕಾರ ರಚಿಸಿಲ್ಲವೇ ಎಂದು ಅದು ವ್ಯಂಗ್ಯವಾಡುತ್ತಿದೆ. ದಿಲ್ಲಿಯ ಅಮಿತ್‌ಶಾ ಅವರ ಆದೇಶಗಳಿಗೆ ಮಣಿಯುವ ಅನಿವಾರ್ಯ ಶಿವಸೇನೆಗಿಲ್ಲ ಎಂದು ಉದ್ಧವ್ ಠಾಕ್ರೆ ಸ್ಪಷ್ಟ ಮಾತಿನಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ಹಂಚದೇ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಗೆ ಕಷ್ಟವಾಗಲಿದೆ. ಇದೀಗ ಶಿವಸೇನೆಯ ನೇತೃತ್ವದಲ್ಲಿ ಹೊಸ ಮೈತ್ರಿ ಸರಕಾರ ರಚನೆಯಾಗುತ್ತದೆಯೋ ಅಥವಾ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯವೋ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು.

ಬಿಜೆಪಿ ಸರಕಾರ ರಚನೆ ಮಾಡುವಲ್ಲಿ ವಿಫಲವಾಯಿತು ಎನ್ನುವ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಸಲ್ಲ. ಬಿಜೆಪಿಯ ಬದಲು ಇತರ ಪಕ್ಷಗಳು ಸರಕಾರ ರಚನೆಗೆ ಮುಂದಾಗುತ್ತದೆಯಾದರೆ ಅದಕ್ಕೆ ರಾಜ್ಯಪಾಲರು ಅವಕಾಶ ನೀಡುವುದು ಅತ್ಯಗತ್ಯವಾಗಿದೆ. ಒಂದು ವೇಳೆ ಅದರಲ್ಲಿ ಶಿವಸೇನೆ ಯಶಸ್ವಿಯಾಯಿತು ಎಂದಾದರೆ ಮಹಾರಾಷ್ಟ್ರ ರಾಜಕೀಯಕ್ಕೆ ಹೊಸ ತಿರುವು ಸಿಕ್ಕಂತಾಗುತ್ತದೆ. ಸದ್ಯಕ್ಕೆ ಇರುವ ಸಾಧ್ಯತೆಯೆಂದರೆ ಶಿವಸೇನೆಯ ಜೊತೆಗೆ ಎನ್‌ಸಿಪಿ ಕೈ ಜೋಡಿಸುವುದು. ಎನ್‌ಸಿಪಿ ಮತ್ತು ಶಿವಸೇನೆ ಜೊತೆಯಾಗುವ ವದಂತಿ ಕಳೆದ ವಿಧಾನ ಸಭೆ ಚುನಾವಣೆಯಲ್ಲೇ ಚಾಲ್ತಿಯಲ್ಲಿತ್ತು. ಒಂದು ವೇಳೆ ಉಭಯ ಪಕ್ಷಗಳಿಗೆ ಸಿಕ್ಕ ಸ್ಥಾನಗಳಿಂದ ಸರಕಾರ ರಚನೆ ಸಾಧ್ಯವಾದರೆ, ಬಿಜೆಪಿಗೆ ತಲಾಖ್ ನೀಡಲು ಶಿವಸೇನೆ ಸಿದ್ಧವಿತ್ತು. ಆದರೆ ಫಲಿತಾಂಶ ತಿರುವುಮುರುವಾಯಿತು. ಬಿಜೆಪಿ ಬಲಿಷ್ಠವಾಗಿ ಹೊರಹೊಮ್ಮಿತು. ಜೊತೆಗೆ ಶಿವಸೇನೆ ಬೆಂಬಲಿಸದೇ ಇದ್ದರೆ ಎನ್‌ಸಿಪಿ ಬೆಂಬಲದಿಂದ ಸರಕಾರ ರಚನೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿತ್ತು. ಬೆಂಬಲ ಕೊಡುವ ಇಂಗಿತವನ್ನು ಅಂದು ಪವಾರ್ ವ್ಯಕ್ತಪಡಿಸಿದ್ದರು ಕೂಡ. ಈ ಕಾರಣದಿಂದ ಕಳೆದ ಬಾರಿ ಬಿಜೆಪಿ ಬೆಂಬಲ ನೀಡಲೇಬೇಕಾದ ಸ್ಥಿತಿ ಶಿವಸೇನೆಗೆ ಒದಗಿತು.

ಅಂದು ಅಮಿತ್ ಶಾ ಮತ್ತು ನರೇಂದ್ರ ಮೋದಿಯವರಿಂದಾದ ಅವಮಾನಗಳನ್ನು ಉದ್ಧವ್ ಠಾಕ್ರೆ ಮರೆತಿಲ್ಲ ಎನ್ನುವುದು ಅವರ ಸದ್ಯದ ನಡೆಗಳಿಂದ ಅರ್ಥವಾಗುತ್ತದೆ. ಮೈತ್ರಿ ಪಕ್ಷವಾದ ಶಿವಸೇನೆಯನ್ನು ಕಳೆದ ಸರಕಾರ ರಚನೆಯ ಸಂದರ್ಭದಲ್ಲಿ ದಿಲ್ಲಿಯ ಬಿಜೆಪಿಯ ವರಿಷ್ಠರು ಅತ್ಯಂತ ತುಚ್ಛವಾಗಿ ಕಂಡಿದ್ದರು. ಬಾಳಾಠಾಕ್ರೆಯಿಲ್ಲದ ಶಿವಸೇನೆಯ ಸ್ಥಾನವನ್ನು ಮಹಾರಾಷ್ಟ್ರದಲ್ಲಿ ತಾನು ತುಂಬಲಿದ್ದೇನೆ ಎಂಬ ಮಹತ್ವಾಕಾಂಕ್ಷೆಯನ್ನು ಅದು ಹೊಂದಿತ್ತು. ಶಿವಸೇನೆ-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಅಂದರೆ, ಸದ್ಯಕ್ಕೆ ಎರಡೂ ಪಕ್ಷಗಳು ಹಿಂದುತ್ವದ ಆಧಾರದಲ್ಲೇ ಮತಗಳನ್ನು ಯಾಚಿಸುತಿವೆ. ಪ್ರಾದೇಶಿಕತೆಯ ಧ್ವನಿ ಈಗ ಹಿಂದಿನಷ್ಟು ತೀವ್ರವಾಗಿಲ್ಲ. ಕಾರ್ಮಿಕ ಸಂಘಟನೆಗಳೂ ಹೆಸರಿಗಷ್ಟೇ ಉಳಿದಿವೆ. ಈ ಸಂದರ್ಭವನ್ನು ಬಳಸಿಕೊಂಡು ಬಿಜೆಪಿಯು ಶಿವಸೇನೆಯ ಮತಗಳನ್ನು ಕಬಳಿಸುವುದಕ್ಕೆ ಹೊಂಚು ಹಾಕಿತ್ತು. ಶಿವಸೇನೆಗೂ ಬಿಜೆಪಿಯ ಕುರಿತಂತೆ ಈ ಭಯ ಸದಾ ಇದೆ. ಒಂದು ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಬಿಜೆಪಿ ಆಶ್ರಯಿಸಿಕೊಂಡಿತ್ತು. ಇಂದು ಬಿಜೆಪಿಯನ್ನು ಶಿವಸೇನೆ ಆಶ್ರಯಿಸಬೇಕಾದ ಸ್ಥಿತಿ ಬಂದಿದೆ ಮಾತ್ರವಲ್ಲ, ಬಿಜೆಪಿಯಿಂದ ನಿರ್ಲಕ್ಷವನ್ನು ಎದುರಿಸುತ್ತಿದೆ. ಇದು ಮುಂದುವರಿದರೆ ಶಿವಸೇನೆಯ ಅಸ್ತಿತ್ವಕ್ಕೇ ಧಕ್ಕೆಯಾಗಬಹುದು ಎನ್ನುವುದು ಅದರ ನಾಯಕರಿಗೆ ಸ್ಪಷ್ಟಮನವರಿಕೆಯಾಗಿದೆ. ಈ ಕಾರಣದಿಂದಲೇ ಬಿಜೆಪಿಯನ್ನು ದೂರವಿಡುವುದಕ್ಕೆ ಅದು ಸಂದರ್ಭವನ್ನು ಕಾಯುತ್ತಿದೆ. ಇದೀಗ ಬಿಜೆಪಿಗೆ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟರೆ, ಅದನ್ನು ಬಳಸಿಕೊಂಡು ಬಿಜೆಪಿ ಮಹಾರಾಷ್ಟ್ರದಲ್ಲಿ ತನ್ನ ಬೇರನ್ನು ಇನ್ನಷ್ಟು ಆಳವಾಗಿ ಇಳಿಸುತ್ತದೆ ಎನ್ನುವ ಭಯದಿಂದಲೇ ಅದು 50:50 ಪಾಲನ್ನು ಬೇಡುತ್ತಿದೆ.

  ‘ಶಿವಸೇನೆಯು ಬಿಜೆಪಿಯ ಜೊತೆ ಸೇರಿ ಸರಕಾರ ರಚಿಸಲಿ, ನಾವು ವಿರೋಧ ಪಕ್ಷದಲ್ಲಿ ಕೂರಲಿದ್ದೇವೆ’ ಎಂದು ಪವಾರ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಅವರು ಕೊನೆಯವರೆಗೂ ಬದ್ಧರಾಗಬೇಕು ಎಂದೇನಿಲ್ಲ. ‘ಅವರು ಕಾದು ನೋಡುವ ತಂತ್ರ’ವನ್ನು ಅನುಸರಿಸುತ್ತಿದ್ದಾರೆ. ಏಕಾಏಕಿ ಮೇಲೆ ಬಿದ್ದು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡರೆ, ಹಿಂದುತ್ವದ ಕಳಂಕವನ್ನು ಪಕ್ಷ ಮೈಗೆ ಅಂಟಿಸಿಕೊಳ್ಳಬೇಕಾಗುತ್ತದೆ. ಇಷ್ಟಕ್ಕೂ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ಯಾವ ಸ್ಥಾನ ನಿರ್ವಹಿಸುತ್ತದೆ ಎನ್ನುವ ಕುರಿತಂತೆಯೂ ಭರವಸೆಯಿಲ್ಲ. ‘ಬಿಜೆಪಿ ಸರಕಾರ ರಚಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎನ್ನುವುದು ಸ್ಪಷ್ಟಪಡಿಸಿಕೊಂಡು ಅದು ಮುಂದೆ ಹೆಜ್ಜೆಯಿಡಲಿದೆ. ಇನ್ನೊಂದು ಚುನಾವಣೆಯನ್ನು ಜನರ ಮೇಲೆ ಹೇರಬಾರದೆನ್ನುವ ಕಾರಣಕ್ಕೆ ಶಿವಸೇನೆಯೊಂದಿಗೆ ಕೈಜೋಡಿಸಿದೆ ಎಂಬ ನಿರೀಕ್ಷಣಾ ಜಾಮೀನಿನ ಜೊತೆಗೆ ಅದು ಮೈತ್ರಿಗೆ ಮುಂದಾಗಬಹುದು.ಎ ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಯಾವ ದಾರಿಯೂ ಇಲ್ಲದೇ ಇರುವುದರಿಂದ ಈ ಮೈತ್ರಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುವ ಸಾಧ್ಯತೆಗಳೂ ಇವೆ.

ಕೇಂದ್ರ ಸರಕಾರ ಶರದ್ ಪವಾರ್ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂಬಿಡುತ್ತಿರುವುದರಿಂದ, ಎನ್‌ಸಿಪಿಗೂ ತನ್ನ ನಾಯಕನನ್ನು ರಕ್ಷಿಸಿಕೊಳ್ಳಲು ಅತ್ಯವಶ್ಯವಾಗಿ ಅಧಿಕಾರ ಬೇಕಾಗಿದೆ. ಬಿಜೆಪಿಯನ್ನು ಹೊರಗಿಟ್ಟು ಶಿವಸೇನೆಯೇನಾದರೂ ಸರಕಾರ ರಚಿಸಲು ಯಶಸ್ವಿಯಾದರೆ, ಅದು ದಿಲ್ಲಿಯ ಬಿಜೆಪಿ ವರಿಷ್ಠರಿಗೆ ಭಾರೀ ಮುಖಭಂಗ ಉಂಟು ಮಾಡಲಿದೆ. ಇಷ್ಟಕ್ಕೂ ಬಿಜೆಪಿ-ಶಿವಸೇನೆಯ ನಡುವಿನ ಮೈತ್ರಿ ಸಂಪೂರ್ಣ ಮುರಿದೇ ಹೋಯಿತು ಎನ್ನುವಂತಿಲ್ಲ. ಶಿವಸೇನೆ ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆಯೇ ಅದರ ಬೇಡಿಕೆಗಳ ಕುರಿತಂತೆ ಬಿಜೆಪಿ ಮೃದುವಾಗುವ ಸಾಧ್ಯತೆಗಳೂ ಇವೆ. ಈ ಹಿಂದೆ ಬಿಜೆಪಿಯ ವಿರುದ್ಧ ಹಲವು ಬಾರಿ ಶಿವಸೇನೆ ಹೇಳಿಕೆಗಳನ್ನು ನೀಡಿದೆ. ಆದರೆ ಮತ್ತೆ ಬಿಜೆಪಿಯ ಜೊತೆಗೆ ಒಂದಾಗಿದೆ. ಅಂತೆಯೇ ಕೊನೆಯ ಗಳಿಗೆಯಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಎನ್‌ಸಿಪಿಗೆ ನಿರಾಶೆ ಮಾಡಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News