ಬಾಬರಿ ಮಸೀದಿ ಧ್ವಂಸ ಕಾನೂನಿನ ತೀವ್ರ ಉಲ್ಲಂಘನೆ, ಪರಿಹಾರ ಅಗತ್ಯ: ಸುಪ್ರೀಂ ಕೋರ್ಟ್

Update: 2019-11-09 17:06 GMT

ಹೊಸದಿಲ್ಲಿ, ನ. 9: ಕಾನೂನಿನ ಆಡಳಿತಕ್ಕೆ ಒಳಪಟ್ಟ ಜಾತ್ಯತೀತ ದೇಶವೊಂದರಲ್ಲಿ ಬಳಸಬಾರದ ವಿಧಾನವೊಂದರ ಮೂಲಕ ಮಸೀದಿಯನ್ನು ಕೆಡವಿ, ಮುಸ್ಲಿಮರನ್ನು ಅವರ ಹಕ್ಕಿನಿಂದ ವಂಚಿತಗೊಳಿಸಿರುವುದನ್ನು ನ್ಯಾಯಾಲಯವು ಕಡೆಗಣಿಸಿದರೆ, ನ್ಯಾಯ ನೀಡಿದಂತೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.

1934ರಲ್ಲಿ ಬಾಬರಿ ಮಸೀದಿಗೆ ಮಾಡಲಾದ ಹಾನಿ, 1949ರಲ್ಲಿ ಮಸೀದಿಯನ್ನು ಅಪವಿತ್ರಗೊಳಿಸಿರುವುದು ಹಾಗೂ ಆ ಮೂಲಕ ಮುಸ್ಲಿಮರನ್ನು ಮಸೀದಿಯಿಂದ ಹೊರಗಟ್ಟಿರುವುದು ಹಾಗೂ ಅಂತಿಮವಾಗಿ 1992 ಡಿಸೆಂಬರ್ 6ರಂದು ಮಸೀದಿಯನ್ನು ಒಡೆದಿರುವುದು ಕಾನೂನು ಆಡಳಿತದ ಗಂಭೀರ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

‘‘1949 ಡಿಸೆಂಬರ್ 22-23ರ ರಾತ್ರಿ ಮಸೀದಿಯಲ್ಲಿ ಹಿಂದೂ ವಿಗ್ರಹಗಳನ್ನು ಇಡುವ ಮೂಲಕ ಮಸೀದಿಯನ್ನು ಅಪವಿತ್ರಗೊಳಿಸಲಾಯಿತು. ಅಂದೇ ಮುಸ್ಲಿಮರನ್ನು ಪ್ರಾರ್ಥನೆ ಮತ್ತು ಜಮೀನಿನ ಹಕ್ಕಿನಿಂದ ಹೊರಗಿಡಲಾಯಿತು. ಅಂದು ಮುಸ್ಲಿಮರನ್ನು ಹೊರಗಿಟ್ಟಿರುವುದು ಯಾವುದೇ ಕಾನೂನುಬದ್ಧ ಪ್ರಾಧಿಕಾರವಲ್ಲ. ಆದರೆ, ಅವರನ್ನು ಪ್ರಾರ್ಥನಾ ಸ್ಥಳದಿಂದ ಹೊರಗಿಡುವ ಲೆಕ್ಕಾಚಾರ ನಡೆಸಿ ರೂಪಿಸಲಾದ ಕೃತ್ಯದ ಮೂಲಕ ಅವರನ್ನು ಹೊರಗಿಡಲಾಯಿತು. 1898ರ ಸಿಆರ್‌ಪಿಸಿ ಕಾಯ್ದೆಯ 145ನೇ ವಿಧಿಯಡಿ ಕಲಾಪಗಳನ್ನು ಆರಂಭಿಸಿದ ಬಳಿಕ ಹಾಗೂ ಒಳಾಂಗಣವನ್ನು ಮುಟ್ಟುಗೋಲು ಹಾಕಿದ ಹಿನ್ನೆಲೆಯಲ್ಲಿ ರಿಸೀವರ್ ನೇಮಕದ ಬಳಿಕ, ಹಿಂದೂ ವಿಗ್ರಹಗಳ ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಇದರ ವಿಚಾರಣೆ ನಡೆಯುತ್ತಿರುವಾಗ ಪೂರ್ವಯೋಜಿತ ರೀತಿಯಲ್ಲಿ ಇಡೀ ಮಸೀದಿ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. 450ಕ್ಕೂ ಅಧಿಕ ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಮಸೀದಿಯಿಂದ ಮುಸ್ಲಿಮರನ್ನು ತಪ್ಪಾಗಿ ವಂಚಿತಗೊಳಿಸಲಾಯಿತು’’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

1992 ಡಿಸೆಂಬರ್ 6ರಂದು ಮಸಿದಿ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಆದೇಶ ಮತ್ತು ಈ ನ್ಯಾಯಾಲಯಕ್ಕೆ ನೀಡಿದ ಭರವಸೆಯನ್ನು ಉಲ್ಲಂಘಿಸಿ ಮಸೀದಿಯನ್ನು ನಾಶಗೊಳಿಸಲಾಯಿತು. ಮಸೀದಿ ನಾಶ ಮತ್ತು ಇಸ್ಲಾಮಿಕ್ ಕಟ್ಟಡದ ವಿನಾಶ ಕಾನೂನಿನ ಆಡಳಿತದ ತೀವ್ರ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಹೇಳಿತು.

ಹೀಗೆ ಅಭಿಪ್ರಾಯ ಪಟ್ಟ ನ್ಯಾಯಾಲಯವು ಆಗಿರುವ ಅನ್ಯಾಯಕ್ಕೆ ಪರಿಹಾರ ಸಿಗಬೇಕು ಎಂದು ಖಾತರಿಪಡಿಸಲು ಸಂವಿಧಾನದ 142ನೇ ವಿಧಿಗೆ ಚಾಲನೆ ನೀಡಿತು.

 ‘‘ಮಸೀದಿ ನಿರ್ಮಾಣ ಮತ್ತು ಇತರ ಚಟುವಟಿಕೆಗಳಿಗೆ ಮುಸ್ಲಿಮರಿಗೆ ಪರ್ಯಾಯ ಜಮೀನನ್ನು ನೀಡುವುದು ಅಗತ್ಯವಾಗಿದೆ ಎನ್ನುವುದು ನಮ್ಮ ನಿಲುವಾಗಿದೆ. ವಿವಾದಾಸ್ಪದ ಜಮೀನಿನ ಒಡೆತನಕ್ಕೆ ಸಂಬಂಧಿಸಿದಂತೆ ಹಿಂದೂಗಳು ಸಲ್ಲಿಸಿರುವ ಪುರಾವೆಗಳು, ಮುಸ್ಲಿಮರು ಸಲ್ಲಿಸಿರುವ ಪುರಾವೆಗಳಿಂದ ಹೆಚ್ಚಿನ ಮೌಲ್ಯವನ್ನು ಹೊಂದಿವೆಯಾದರೂ, 1949 ಡಿಸೆಂಬರ್ 22ರ ರಾತ್ರಿ ಮಸೀದಿಯನ್ನು ಅಪವಿತ್ರಗೊಳಿಸಿದ ಬಳಿಕ ಮುಸ್ಲಿಮರು ಆ ಸ್ಥಳವನ್ನು ಕಳೆದುಕೊಂಡರು ಎನ್ನುವುದನ್ನೂ ಗಮನಿಸಬೇಕಾಗಿದೆ. ಮುಸ್ಲಿಮರು ಮಸೀದಿಯನ್ನು ತೊರೆದಿರಲಿಲ್ಲ. ಆಗಿರುವ ತಪ್ಪಿಗೆ ಪರಿಹಾರ ಆಗಬೇಕಾಗಿದೆ ಎನ್ನುವ ನಿಲುವನ್ನು ಈ ನ್ಯಾಯಾಲಯ ಹೊಂದಿದೆ. ಕಾನೂನಿನ ಆಡಳಿತಕ್ಕೆ ಒಳಪಟ್ಟ ಜಾತ್ಯತೀತ ದೇಶವೊಂದರಲ್ಲಿ ಬಳಸಬಾರದ ವಿಧಾನವೊಂದರ ಮೂಲಕ ಮಸೀದಿಯನ್ನು ಕೆಡವಿ, ಮುಸ್ಲಿಮರನ್ನು ಅವರ ಹಕ್ಕಿನಿಂದ ವಂಚಿತಗೊಳಿಸಿರುವುದನ್ನು ನ್ಯಾಯಾಲಯವು ಕಡೆಗಣಿಸಿದರೆ, ನ್ಯಾಯ ನೀಡಿದಂತೆ ಆಗುವುದಿಲ್ಲ. ಎಲ್ಲ ಧರ್ಮಗಳು ಸಮಾನ ಎಂದು ಸಂವಿಧಾನ ಹೇಳುತ್ತದೆ. ಸಹಿಷ್ಣುತೆ ಮತ್ತು ಸಹಬಾಳ್ವೆಯು ನಮ್ಮ ದೇಶ ಮತ್ತು ಅದರ ಜನರ ಜಾತ್ಯತೀತ ಬದ್ಧತೆಯನ್ನು ಪೋಷಿಸುತ್ತದೆ. ಹಾಗಾಗಿ, 5 ಎಕರೆ ಜಮೀನನ್ನು ಸುನ್ನಿ ವಕ್ಫ್ ಮಂಡಳಿಗೆ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಅಯೋಧ್ಯೆ ಪಟ್ಟಣದಲ್ಲೇ ನೀಡಬೇಕು’’ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಇಸ್ಲಾಮಿಕ್ ತತ್ವಗಳಿಗೆ ಮಸೀದಿ ಅನುಗುಣವಾಗಿಲ್ಲ ಎಂಬ ವಾದ ತಿರಸ್ಕರಿಸಿದ ನ್ಯಾಯಾಲಯ

ಮಸೀದಿಯು ಇಸ್ಲಾಮಿಕ್ ತತ್ವಗಳಿಗೆ ಅನುಗುಣವಾಗಿಲ್ಲ ಎಂಬ ಹಿಂದೂ ಬಣದ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

ಮುಸ್ಲಿಮರು ಮಸೀದಿಯನ್ನು ಯಾವತ್ತೂ ತೊರೆದಿಲ್ಲ ಹಾಗೂ 1949ರ ಡಿಸೆಂಬರ್‌ವರೆಗೂ ಶುಕ್ರವಾರಗಳಂದು ಮುಸ್ಲಿಮರು ಅಲ್ಲಿ ನಮಾಝ್ ನಡೆಸುತ್ತಿದ್ದರು. 1949 ಡಿಸೆಂಬರ್ 16ರಂದು ಅಲ್ಲಿ ಕೊನೆಯ ನಮಾಝ್ ನಡೆದಿತ್ತು ಎಂದು ನ್ಯಾಯಾಲಯ ಹೇಳಿತು.

ವಿವಾದಿತ ಕಟ್ಟಡದಲ್ಲಿ ಇರುವ ಮೂರು ಗುಮ್ಮಟಗಳು, ‘ಅಲ್ಲಾಹ್’ ಎಂದು ಕಲ್ಲಿನಲ್ಲಿ ಬರೆದ ಬರಹ, ಕಟ್ಟಡದಲ್ಲಿರುವ ಮಿಂಬರ್ ಮತ್ತು ಮೆಹ್ರಾಬ್‌ಗಳು ಆ ಕಟ್ಟಡವನ್ನು ಮಸೀದಿಯಾಗಿ ನಿರ್ಮಿಸಲಾಗಿದೆ ಎನ್ನುವುದನ್ನು ಖಚಿತಪಡಿಸುತ್ತವೆ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News