ಕಾಂಗ್ರೆಸ್ ನಮ್ಮ ಶತ್ರುವಲ್ಲ, ನಮ್ಮ ರಣನೀತಿ ಘೋಷಿಸುತ್ತೇವೆ: ಶಿವಸೇನೆ

Update: 2019-11-10 08:16 GMT

ಮುಂಬೈ, ನ.10: ಮಹಾರಾಷ್ಟ್ರದಲ್ಲಿ ಬೇರೆ ಯಾರೂ ಕೂಡ ಸರಕಾರ ರಚಿಸಲು ಸಾಧ್ಯವಾಗದಿದ್ದರೆ ಆಗ ನಮ್ಮ ಪಕ್ಷ ಮುಂದಿನ ರಣನೀತಿಯ ಬಗ್ಗೆ ಘೋಷಿಸಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ರವಿವಾರ ತಿಳಿಸಿದ್ದಾರೆ.

‘‘ರಾಜ್ಯದಲ್ಲಿ ಬಿಜೆಪಿಗೆ ಸರಕಾರ ರಚನೆ ಮಾಡಲು ಆಹ್ವಾನ ನೀಡಿರುವ ರಾಜ್ಯಪಾಲ ಭಗತ್ ಸಿಂಗ್ ಅವರ ನಿರ್ಧಾರವನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ. ಇದೀಗ ರಾಜ್ಯಪಾಲರ ಮಧ್ಯಪ್ರವೇಶದಿಂದಾಗಿ ರಾಜ್ಯದಲ್ಲಿ ಸರಕಾರ ರಚನೆಯಾಗುವ ವಿಶ್ವಾಸ ಮೂಡಿದೆ. ಅತಿ ದೊಡ್ಡ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸಲಾಗಿದೆ. ತನಗೆ ಬಹುಮತ ಇದೆ ಎಂಬ ವಿಶ್ವಾಸವಿದ್ದಿದ್ದರೆ ಫಲಿತಾಂಶ ಬಂದ 24 ಗಂಟೆಯೊಳಗೆ ಬಿಜೆಪಿ ಏಕೆ ಸರಕಾರ ರಚನೆಯ ಹಕ್ಕು ಮಂಡಿಸಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ’’ಎಂದು ರಾವತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಶಿವಸೇನೆಯ ಮುಂದಿನ ಕ್ರಮ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ರಾವತ್,‘‘ರಾಜ್ಯಪಾಲರ ಮೊದಲ ಹೆಜ್ಜೆಯಿಂದಾಗಿ ಒಂದು ಚಿತ್ರಣ ಸ್ಪಷ್ಟವಾಗಿದೆ. ಬೇರೆ ಯಾರೂ ಕೂಡ ಸರಕಾರ ರಚಿಸಲು ಸಾಧ್ಯವಾಗದಿದ್ದರೆ ಶಿವಸೇನೆ ತನ್ನ ರಣನೀತಿಯನ್ನು ಘೋಷಿಸಲಿದೆ’’ ಎಂದರು.

ಕಾಂಗ್ರೆಸ್ ನಮ್ಮ ಶತ್ರುವಲ್ಲ

‘‘ಪ್ರತಿಯೊಬ್ಬರು ರಾಜ್ಯದಲ್ಲಿ ಸ್ಥಿರ ಸರಕಾರ ರಚಿಸಲು ಬಯಸುತ್ತಿದ್ದಾರೆ. ಕಾಂಗ್ರೆಸ್ ನಮಗೆ ಶತ್ರುವಲ್ಲ. ನಮ್ಮ ಸಿದ್ದಾಂತಗಳು ಭಿನ್ನವಾಗಿವೆ. ಇದರರ್ಥ ನಾವು ವೈರಿಗಳೆಂದಲ್ಲ. ಕೆಲವು ವಿಷಯಗಳಿಗೆ ಸಂಬಂಧಿಸಿ ಬಿಜೆಪಿ ವಿರುದ್ಧವೂ ನಾವು ವಾಗ್ದಾಳಿ ನಡೆಸಿದ್ದೇವೆ. ಇದರರ್ಥ ನಾವು ಅವರ ವೈರಿಗಳು ಎಂದರ್ಥವಲ್ಲ. ಪ್ರತಿಯೊಬ್ಬರು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ’’ ಎಂದು ರಾವತ್ ಹೇಳಿದ್ದಾರೆ.

ಎನ್‌ಸಿಪಿ-ಕಾಂಗ್ರೆಸ್‌ಗೆ ರಾಜ್ಯಪಾಲರು ಆಹ್ವಾನ ನೀಡಲಿ: ಮಿಲಿಂದ್

ಬಿಜೆಪಿ ಹಾಗೂ ಶಿವಸೇನೆಯ ಮಧ್ಯೆ ಹಗ್ಗಜಗ್ಗಾಟ ಮುಂದುವರಿದರೆ ಎರಡನೇ ದೊಡ್ಡ ಮೈತ್ರಿ ಪಕ್ಷವಾಗಿರುವ ಎನ್‌ಸಿಪಿ ಹಾಗೂ ಕಾಂಗ್ರೆಸ್‌ಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಮಿಲಿಂದ್ ದೇವೊರಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News