​ದಾಖಲೆ ಸೃಷ್ಟಿಸಿದ ಚಾರಣ ಹುಲಿಗಳು !

Update: 2019-11-11 03:57 GMT
ಸಾಂದರ್ಭಿಕ ಚಿತ್ರ

ನಾಗ್ಪುರ : ಸುಧೀರ್ಘ ಅಂತರವನ್ನು ಚಾರಣ ಮೂಲಕ ಕ್ರಮಿಸಿದ ಎರಡು ಹುಲಿಗಳು ದಾಖಲೆಯ ಪುಟ ಸೇರಿವೆ. ಒಂದು ಹುಲಿ 1160 ಕಿಲೋಮೀಟರ್ ಹಾಗೂ ಮತ್ತೊಂದು ಹುಲಿ 450 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ, ದೇಶದಲ್ಲೇ ಇದುವರೆಗೆ ಗರಿಷ್ಠ ದೂರಕ್ಕೆ ನಡೆದುಕೊಂಡು ಹೋದ ಹುಲಿಗಳು ಎಂಬ ಖ್ಯಾತಿಗೆ ಪಾತ್ರವಾಗಿವೆ.

ಮಹಾರಾಷ್ಟ್ರದ ಯಾವತ್ಮಲ್ ಪಂದರ್‌ಕಾವ್ಡಾದಲ್ಲಿರುವ ತಿಪ್ಪೇಶ್ವರ ವನ್ಯಧಾಮದ ರೇಡಿಯೊ ಕಾಲರ್ ಅಳವಡಿಸಿದ ಹುಲಿ (ಸಿ1) ವನ್ಯಧಾಮದಿಂದ ಹೊರಗೆ ಕಾಲಿಟ್ಟು ತನ್ನ ಹೊಸ "ಮನೆ"ಗಾಗಿ 2019ರ ಜೂನ್ 21ರಂದು ಪಯಣ ಆರಂಭಿಸಿತ್ತು. ಇದಕ್ಕೆ 2019ರ ಫೆಬ್ರುವರಿ 27ರಂದು ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ಇದುವರೆಗೆ ಈ ಹುಲಿ ತೆಲಂಗಾಣ ಮತ್ತು ಮಹಾರಾಷ್ಟ್ರದ ಆರು ಜಿಲ್ಲೆಗಳಲ್ಲಿ 1160 ಕಿಲೋಮೀಟರ್ ಕ್ರಮಿಸಿದೆ. ಜನಪ್ರಾಬಲ್ಯ ಇರುವ ಪ್ರದೇಶಗಳ ಮೂಲಕವೇ ಸಂಚರಿಸಿದ್ದರೂ, ಯಾರ ಕಣ್ಣಿಗೂ ಬಿದ್ದಿಲ್ಲ.

ಮತ್ತೊಂದು ಹುಲಿ (ಕೆ7) ತೆಲಂಗಾಣದ ಕಾಗರ್ನಗರದ ಫಲ್ಗುಣ ಎಂಬ ಹುಲಿಯ ಗಂಡುಮರಿ 2019ರ ಸೆಪ್ಟೆಂಬರ್ 11ರಂದು ಮಹಾರಾಷ್ಟ್ರದ ಪ್ರಾಣಿಹಿತ ವನ್ಯಧಾಮದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತ್ತು. ಮಳೆಗಾಲದ ಬಳಿಕ ಅದು ವಾಪಸ್ಸಾಗುತ್ತದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ ಅಕ್ಟೋಬರ್ 19ರಂದು ಮಹಾರಾಷ್ಟ್ರದ ಗಡಚಿರೋಲಿ ಬಳಿಕ ಅಲ್ಲಪಳ್ಳಿ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು. ಎರಡೂ ಹುಲಿಗಳು ಈ ಅಪೂರ್ವ ಚಾರಣ ಕೈಗೊಂಡಿರುವುದು ಮಾತ್ರವಲ್ಲದೇ, ಯಾವುದೇ ಅಪಾಯವಿಲ್ಲದೇ ತಮ್ಮ ಯಾನ ಮುಂದುವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News